ಗುಂಡ್ಲುಪೇಟೆ ತಾಲೂಕಿನ ಲಕ್ಕೂರು ಗ್ರಾಮದ ಕಬ್ಬಿನ ಗದ್ದೆಯಲ್ಲಿ ಪತ್ತೆಯಾದ ಚಿರತೆಮರಿಗಳು.  
ಜಿಲ್ಲೆ

ಚಿರತೆ ಮರಿಗಳನ್ನು ಮರಳಿ ಗದ್ದೆಗೆ ಬಿಟ್ಟ ಅರಣ್ಯ ಇಲಾಖೆ

ಶಿವಶಂಕರ್ ಎಂ. ಹೆಬ್ಬಳ್ಳ

ಗುಂಡ್ಲುಪೇಟೆ : ರೈತರು ಹಿಡಿದು ತಂದಿದ್ದ ಚಿರತೆ ಮರಿಗಳನ್ನು ಮರಳಿ ಗದ್ದೆಗೆ ಅರಣ್ಯ ಸಿಬ್ಬಂದಿ ಬಿಟ್ಟಿದ್ದಾರೆ. ತಾಲೂಕಿನ ಲಕ್ಕೂರು ಗ್ರಾಮದ ಮಹದೇವಪ್ಪ ಎಂಬುವರ ಜಮೀನಿನಲ್ಲಿ ಸೋಮವಾರ ಸಂಜೆ ಕಬ್ಬು ಕತ್ತರಿಸುವಾಗ ಎರಡು ಚಿರತೆಮರಿಗಳು ಕಂಡುಬಂದಿತ್ತು. ಕಬ್ಬು ಕಟಾವು ಮಾಡುತ್ತಿದ್ದ ಕಾರ್ಮಿಕರು ಸಣ್ಣ ಮರಿಗಳನ್ನು ಬಿಸಿಲಿನಿಂದ ರಕ್ಷಿಸುವ ಸಲುವಾಗಿ ಆಲೆ ಮನೆಗೆ ತಂದಿದ್ದರು. ನಂತರ ಅರಣ್ಯ ಇಲಾಖೆ ಗಮನಕ್ಕೆ ತರಲಾಗಿತ್ತು. ಕೂಡಲೇ ಸ್ಥಳಕ್ಕೆ ತೆರಳಿದ್ದ ಅರಣ್ಯ ಸಿಬ್ಬಂದಿ ಮರಿಗಳನ್ನು ಮೊದಲು ಇದ್ದ ಸ್ಥಳದಲ್ಲೇ ಬಿಟ್ಟು ಬಂದಿದ್ದರು. ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಚಿರತೆ ತನ್ನ ಮರಿಗಳನ್ನು ಪಕ್ಕದ ಜಮೀನಿಗೆ ಸ್ಥಳಾಂತರ ಮಾಡಿರುವುದು ಖಚಿತವಾಗಿದೆ. ಜಮೀನಿನ ಬಳಿ ರಾತ್ರಿ ಮತ್ತು ಹಗಲು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಸ್ಥಳೀಯರು ಹತ್ತಿರ ಹೋಗದಂತೆ ಸೂಚನೆ ನೀಡಲಾಗಿದೆ ಎಂದು ಆರ್‌ಎಫ್‌ಒ ನವೀನ್ ಕುಮಾರ್ ತಿಳಿಸಿದ್ದಾರೆ.