ಗುಂಡ್ಲುಪೇಟೆ: ತಮಿಳುನಾಡಿನ ಕಸಾಯಿಖಾನೆಗೆ ಸಾಗಿಸುತ್ತಿದ್ದ ರಾಸುಗಳನ್ನು ತಾಲೂಕಿನ ತೆರಕಣಾಂಬಿ ಪೊಲೀಸರು ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.
ಬೇಗೂರು ಸಂತೆಯಲ್ಲಿ ಸೋಮವಾರ ಕಡಿಮೆ ಬೆಲೆಗೆ ಖರೀದಿಸಿದ ಎತ್ತು ಹಾಗೂ ಎರಡು ಎಳೆಯ ಕರುವನ್ನು ಟಾಟಾ ಏಸ್ ವಾಹನದಲ್ಲಿ ತಾಳವಾಡಿಯ ಕಸಾಯಿಖಾನೆಗೆ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ತೆರಕಣಾಂಬಿ ಠಾಣೆಯ ಸಬ್ ಇನ್‌ಸ್ಪೆಪೆಕ್ಟರ್ ಕೆ.ಎಮ್.ಮಹೇಶ್ ಹಾಗೂ ಸಿಬ್ಬಂದಿ ಕಿಲಗೆರೆ ಗೇಟ್ ಸಮೀಪ ದಾಳಿ ನಡೆಸಿದರು. ಬಳಿಕ ವಾಹನದಲ್ಲಿದ್ದ ಎರಡು ಎತ್ತುಗಳು ಹಾಗೂ ಒಂದು ಕರುವನ್ನು ರಕ್ಷಿಸಿದರು.
ತೆರಕಣಾಂಬಿ ಗ್ರಾಮದ ನಿವಾಸಿಗಳಾದ ನಯಾಜ್ ಪಾಶಾ ಮತ್ತು ರೋಷನ್ ಅವರನ್ನು ಬಂಧಿಸಿದರೆ ಕೆಲಸೂರು ಗ್ರಾಮದ ಸೋಮೇಶ್ ಎಂಬಾತ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಜಾನುವಾರುಗಳನ್ನು ಕನಕಗಿರಿಯ ಪಿಂಜರಾಪೋಲ್‌ಗೆ ಒಪ್ಪಿಸಿದ್ದಾರೆ.
ಆರೋಪಿಗಳನ್ನು ನ್ಯಾಯಾಂಗ ಬಂಧಕ್ಕೆ ಒಪ್ಪಿಸಲಾಗಿದ್ದು, ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಬಂಗಾರನಾಯ್ಕ, ಕೃಷ್ಣ, ರಾಜಶೇಖರ್, ಸುರೇಶ್ ಭಾಗವಹಿಸಿದ್ದರು.