ಅರಸೀಕೆರೆ: ಹೆಣ್ಣು ಮಕ್ಕಳ ರಕ್ಷಣೆಗೆ ಕೇಂದ್ರ, ರಾಜ್ಯ ಸರ್ಕಾರ ತಂದಿರುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಹೇಳಿದರು.
ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಬುಧವಾರ ನಗರದ ಬಸ್ ನಿಲ್ದಾಣದ ಆವರಣದಲ್ಲಿ ಹಮ್ಮಿಕೊಂಡಿದ್ದ ಬೇಟಿ ಬಚಾವೋ, ಬೇಟಿ ಪಡಾವೋ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜ್ಞಾನ, ತಂತ್ರಜ್ಞಾನ ಉತ್ತುಂಗಕ್ಕೆ ತಲುಪಿರುವ ಕಾಲಘಟ್ಟದಲ್ಲಿಯೂ ಭ್ರೂಣ ಹತ್ಯೆ ನಡೆಯುತ್ತಿರುವುದು ಆತಂಕದ ಸಂಗತಿ. ಇಂತಹ ಕೃತ್ಯದಲ್ಲಿ ತೊಡಗಿಕೊಳ್ಳುವವರಿಗೆ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಲು ಅವಕಾಶ ಕಲ್ಪಿಸಲಾಗಿದೆ. ಲಿಂಗ ತಾರತಮ್ಯ ಮಾಡುವ ಪ್ರವೃತ್ತಿ ಸರಿಯಲ್ಲ. ಹೆಣ್ಣು ಮಕ್ಕಳಿಗೆ ಎಲ್ಲ ರೀತಿಯ ಸಮಾನ ಅವಕಾಶಗಳಿವೆ. ಉಭಯ ಸರ್ಕಾರಗಳ ಯೋಜನೆಗಳನ್ನು ತಲುಪಿಸುವ ಜತೆಗೆ ಹೆಣ್ಣು ಮಕ್ಕಳ ರಕ್ಷಣೆಗೆ ಬದ್ಧರಾಗೋಣ ಎಂದು ಹೇಳಿದರು.
ಮಾನವ ಕಲಾತಂಡ ಹಾಗೂ ಹೊಯ್ಸಳ ಜಾನಪದ ಕಲಾತಂಡಗಳು ನಾಟಕ ಪ್ರದರ್ಶನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು. ನಗರಸಭೆ ಅಧ್ಯಕ್ಷ ಎಂ.ಸಮಿವುಲ್ಲಾ ತಮಟೆ ಬಾರಿಸುವ ಮೂಲಕ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ನಗರಠಾಣೆ ಎಸ್.ಐ.ರಾಘವೇಂದ್ರ, ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿದರು.