Child Labour program 
ಜಿಲ್ಲೆ

2 ವರ್ಷದಲ್ಲಿ 76 ಬಾಲಕಾರ್ಮಿಕರ ರಕ್ಷಣೆ

ಶಿವರಾಜ.ಎಂ

ಬಾಲ್ಯ ಕಸಿಯುತ್ತಿರುವ ಮಾಲೀಕರು

ಶಾಲೆಯಿಂದ ಹೊರಗುಳಿಯುತ್ತಿರುವ ಮಕ್ಕಳು!

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಶಿಕ್ಷಾರ್ಹ ಅಪರಾಧವಾಗಿರುವ ಬಾಲಕಾರ್ಮಿಕ ಪದ್ಧತಿ ತಡೆಗೆ ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆ ಸಹಭಾಗಿತ್ವದಲ್ಲಿ ಕಸರತ್ತು ನಡೆಸುತ್ತಿದ್ದರೂ ಜಿಲ್ಲೆಯಲ್ಲಿ ಮಕ್ಕಳನ್ನು ಕಾರ್ಮಿಕರನ್ನಾಗಿ ದುಡಿಸಿಕೊಳ್ಳುವ ಪ್ರಕರಣ ಕಂಡುಬರುತ್ತಲೇ ಇವೆ.
ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದೆರಡು ವರ್ಷದ ಅಂಕಿಅಂಶ ಗಮನಿಸಿದರೆ 76 ಬಾಲ ಕಾರ್ಮಿಕರು ಪತ್ತೆಯಾಗಿರುವುದು ಈ ಪದ್ಧತಿ ಮುಂದುವರಿದಿರುವುದಕ್ಕೆ ಸಾಕ್ಷಿಯಾಗಿದೆ.
ಬಡತನ ಒಂದು ಕಾರಣವಾದರೆ, ಕಡಿಮೆ ಕೂಲಿಗೆ ಹೆಚ್ಚು ದುಡಿಸಿಕೊಳ್ಳುವ ಕಾರಣಕ್ಕೆ ಹಲವು ಮಾಲೀಕರು ವಿವಿಧ ಉದ್ದಿಮೆಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಇಲಾಖೆಗಳ ದಾಳಿಯಲ್ಲಿ ಕಂಡುಬಂದಿದೆ. ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವುದು ಶಿಕ್ಷಾರ್ಹ ಎಂಬುದು ತಿಳಿದಿದ್ದರೂ ಹಲವು ಮಾಲೀಕರು ಮಕ್ಕಳ ಬಾಲ್ಯ ಕಸಿಯುತ್ತಿದ್ದಾರೆ.


ಶಾಲೆಗೆ ಗುಡ್‌ಬೈ
ಸಾಮಾನ್ಯವಾಗಿ ಶಾಲೆಗಳಿಗೆ ಬೇಸಿಗೆ ರಜೆ ನೀಡಿದಾಗ ಅನೇಕ ಮಕ್ಕಳು ರಜಾ ದಿನಗಳಲ್ಲಿ ದುಡಿಮೆಗೆ ಸೇರಿಕೊಳ್ಳುವುದು ಕಂಡುಬರುತ್ತಿದೆ. ಇದರಲ್ಲಿ ತೊಡಗಿಸಿಕೊಂಡ ಅನೇಕ ಮಕ್ಕಳು ರಜೆ ಮುಗಿದು ಶಾಲೆಗಳು ಪುನರಾರಂಭಗೊಂಡ ಬಳಿಕ ಶಾಲೆಯತ್ತ ಹೆಜ್ಜೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ. ಮನೆಯವರ ಒತ್ತಡಕ್ಕೋ ಅಥವಾ ಸ್ವ ಆಸಕ್ತಿಯಿಂದಲೂ ಕ್ರಮೇಣ ಮಕ್ಕಳು ಶಾಲೆಗೆ ಗುಡ್‌ಬೈ ಹೇಳುವ ಸಂದರ್ಭ ಎದುರಾಗುತ್ತಿದೆ.

ಆಟೋ ರಥಯಾತ್ರೆ:
ಬಾಲಕರನ್ನು ಕಾರ್ಮಿಕರನ್ನಾಗಿ ದುಡಿಮೆಗೆ ಬಳಸಿಕೊಳ್ಳುವ ಪದ್ಧತಿ ತಡೆ ಬಗ್ಗೆ ಜಿಲ್ಲೆಯಲ್ಲಿ ಈ ಹಿಂದೆ ಚಾಲನೆ ನೀಡಿದ ಬಾಲಕಾರ್ಮಿಕ ಪದ್ಧತಿ ಜಾಗೃತಿ ಜಾಥಾ ಆಟೋ ರಥಯಾತ್ರೆ ಜಿಲ್ಲೆಯಾದ್ಯಂತ ಸುಮಾರು ಎರಡೂವರೆ ಸಾವಿರ ಕಿಮೀ ಕ್ರಮಿಸಿ ಜಾಗೃತಿ ಮೂಡಿಸಿತ್ತು. 19 ದಿನಗಳ ರಥಯಾತ್ರೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿಯಾಗಿದ್ದರು. ಇಷ್ಟೆಲ್ಲ ಕಸರತ್ತು ನಡೆಸುತ್ತಿದ್ದರೂ ಜಿಲ್ಲೆಯ ಅಲ್ಲಲ್ಲಿ ಬಾಲಕಾರ್ಮಿಕರು ಸದ್ದಿಲ್ಲದೆ ದುಡಿಮೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಮುಂದುವರೆದಿದೆ.

ಎಲ್ಲೆಲ್ಲಿ ಬಾಲಕಾರ್ಮಿಕರು?
ಗ್ಯಾರೇಜ್
ನರ್ಸರಿ,
ಇಟ್ಟಿಗೆ ಭಟ್ಟಿ
ಹೋಟೆಲ್
ರೆಸ್ಟೋರೆಂಟ್ ಇತ್ಯಾದಿ..

ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮ ಆರೋಗ್ಯದೊಂದಿಗೆ ಕಡ್ಡಾಯ ಶಿಕ್ಷಣ ನೀಡಬೇಕು. ಇದು ಪ್ರತಿಯೊಬ್ಬ ಪಾಲಕರ ಕರ್ತವ್ಯ, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳನ್ನು ಉದ್ಯೋಗಗಳಲ್ಲಿ ತೊಡಗುವಂತೆ ಮಾಡಿದರೆ ಅಂತಹ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಬಲಹೀನರಾಗುತ್ತಾರೆ. ಬಾಲ ಕಾರ್ಮಿಕ ವ್ಯವಸ್ಥೆ ನಿರ್ಮೂಲನೆಗಾಗಿ ಪ್ರತಿಯೊಬ್ಬರೂ ಸಹಕರಿಸಬೇಕು.

ನಾಗೇಂದ್ರ, ಜಿಲ್ಲಾ ಕಾರ್ಮಿಕ ಇಲಾಖೆ ನಿರೀಕ್ಷಕ

ಹದಿನಾಲ್ಕು ವರ್ಷದೊಳಗಿನ ಯಾವುದೇ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ಉದ್ಯೋಗಕ್ಕೆ ನಿಯೋಜನೆಗೊಳಿಸಿದಲ್ಲಿ ಅಂತಹವರಿಗೆ ಕನಿಷ್ಠ 6 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಹಾಗೂ 2 ವರ್ಷದವರೆಗ ಜೈಲು ಶಿಕ್ಷೆ ಮತ್ತು 20 ಸಾವಿರದಿಂದ 50 ಸಾವಿರ ರೂಪಾಯಿವರತೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

ಎಸ್.ಸುಬ್ಬಾರಾವ್, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ

ಬಾಲಕಾರ್ಮಿಕರ ರಕ್ಷಣೆ ಎಲ್ಲೆಲ್ಲಿ?
2022-23
14 ವರ್ಷಕ್ಕಿಂತ ಕಡಿಮೆ ವಯಸ್ಸು 14ರಿಂದ 18 ವರ್ಷದೊಳಗಿನ ಮಕ್ಕಳು ಒಟ್ಟು
ದೊಡ್ಡಬಳ್ಳಾಪುರ 4 11 15
ದೇವನಹಳ್ಳಿ 3 16 19
ಹೊಸಕೋಟೆ 3 2 05
ನೆಲಮಂಗಲ 2 4 06

ಒಟ್ಟು 45

2023-24
ದೊಡ್ಡಬಳ್ಳಾಪುರ 0 4 04
ದೇವನಹಳ್ಳಿ 0 6 06
ಹೊಸಕೋಟೆ 0 12 12
ನೆಲಮಂಗಲ 1 8 09
ಒಟ್ಟು 31