ಜಿಲ್ಲೆ

ಗೋಮಾಳಕ್ಕೆ ಬೇಲಿ ಹಾಕಿ ಜಾನುವಾರುಗಳ ಸಂರಕ್ಷಣೆಗೆ ಮುಂದಾಗಲಾಗುವುದು: ಹರೀಶ್ ಜಿ.ಆಚಾರ್ಯ

ಮಡಿಕೇರಿ: ಗೋಸಂರಕ್ಷಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮ ವ್ಯಾಪ್ತಿಗಳಲ್ಲಿನ ಗೋಮಾಳಗಳಿಗೆ ಆಯಾ ವ್ಯಾಪ್ತಿಯಲ್ಲಿನ ಗೋಶಾಲೆಗಳಿಂದ ಬೇಲಿ ಹಾಕಿ, ಜಾನುವಾರುಗಳ ಸಂರಕ್ಷಣೆಗೆ ರಾಜ್ಯ ವ್ಯಾಪಿ ಕಾರ್ಯಕ್ರಮ ರೂಪಿಸಲಾಗುವುದೆಂದು ಕುಶಾಲನಗರ ಬಳಿಯ ಚಿಕ್ಕತ್ತೂರು ಗ್ರಾಮದ ಶ್ರೀಕೃಷ್ಣ ಗೋ ಶಾಲೆಯ ಅಧ್ಯಕ್ಷರು ಹಾಗೂ ಪ್ರಾಣಿ ದಯಾ ಸಂಘದ ಸದಸ್ಯ ಹರೀಶ್ ಜಿ.ಆಚಾರ್ಯ ತಿಳಿಸಿದರು.


ಗೋಮಾಳಗಳನ್ನು ಯಾವುದೇ ಸಂಘ-ಸಂಸ್ಥೆಗಳು, ಟ್ರಸ್ಟ್‌ಗಳಿಗೆ ಕಾನೂನೂ ಬದ್ಧವಾಗಿ ನೀಡಲು ಬರುವುದಿಲ್ಲವೆಂದು ಸರ್ಕಾರ ತಿಳಿಸುತ್ತದೆ. ಆದರೆ, ಇದೇ ಗೋಮಾಳಗಳನ್ನು ಅತಿಕ್ರಮಿಸಿಕೊಂಡು ಸಾಕಷ್ಟು ಜನ ಮನೆಗಳನ್ನು ನಿರ್ಮಿಸಿದ ಪ್ರಕರಣಗಳಿವೆ. ಅವರನ್ನು ತೆರವು ಮಾಡಬೇಕೆಂದು ನಾವು ಹೇಳುತ್ತಿಲ್ಲ. ಆದರೆ, ಆ ಸಂದರ್ಭ ಮೌನವಾಗಿದ್ದ ಸರ್ಕಾರ ಗೋವುಗಳಿಗೆ ಅನುಕೂಲ ಮಾಡಿಕೊಡುವ ಗೋಶಾಲೆಗಳಿಗೆ ಗೋಮಾಳವನ್ನು ಒದಗಿಸಲು ಯಾಕೆ ಮುಂದಾಗುತ್ತಿಲ್ಲವೆಂದು ಇತ್ತೀಚೆಗೆ ಪ್ರಶ್ನಿಸಿದರು.

ಮಡಿಕೇರಿಯ ಕೆ.ನಿಡುಗಣೆಯಲ್ಲಿ ಇರುವ ೨೪.೫ ಏಕರೆ ಗೋಮಾಳದಲ್ಲಿ ೮ ಏಕರೆ ಜಾಗದಲ್ಲಿ ಸರ್ಕಾರ ಗೋ ಶಾಲೆಯನ್ನು ನಿರ್ಮಿಸಿದೆ. ಇದರಲ್ಲಿ ೫೦ ಗೋವಿಗಳಿಗೆ ಶೆಡ್, ಹುಲ್ಲು ಶೇಖರಿಸಿಡಲು ಗೋದಾಮಿನ ವ್ಯವಸ್ಥೆ ಮಾಡಲಾಗಿದೆ. ಲಭ್ಯವಿರುವ ಗೋಮಾಳದ ಎಲ್ಲಾ ಜಾಗವನ್ನು ಬಳಸಿಕೊಂಡು ಕನಿಷ್ಟ ೨೦೦ ಗೋವುಗಳಿಗೆ ಆಶ್ರಯ ನೀಡುವುದು ಅಗತ್ಯವೆಂದು ಹರೀಶ್ ಆಚಾರ್ಯ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಶ್ರೀಕೃಷ್ಣ ಗೋಶಾಲೆಯ ಸದಸ್ಯರಾದ ಚೌರೀರ ರಮೇಶ್, ಚೆಟ್ಟಿಮಾಡ ಲೋಕೇಶ್, ರವಿ ಗುರುಸ್ವಾಮಿ, ಪೋರನ ರಾಘವೇಂದ್ರ ಹಾಗೂ ಸೋಮನಾಥ್ ಉಪಸ್ಥಿತರಿದ್ದರು.