ಮದ್ದೂರು: ಬೆಂಗಳೂರಿನ ಕಸಾಯಿಖಾನೆಗೆ ಆಕ್ರಮವಾಗಿ ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಜಾನುವಾರುಗಳನ್ನು ಹಿಂದುಪರ ಮುಖಂಡ ಪುನೀತ್ ಕೆರೆಹಳ್ಳಿ ತಂಡ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಪಟ್ಟಣದ ಪ್ರವಾಸಿ ಮಂದಿರದ ಬಳಿ 30ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಿದ ನಂತರ ಪುನೀತ್ ಕೆರೆಹಳ್ಳಿ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ ಪರಿಣಾಮ ತಕ್ಷಣವೇ ಸ್ಥಳಕ್ಕೆ ಪೊಲೀಸರು ಆಗಮಿಸಿ ವಾಹನದ ಚಾಲಕ ಮನ್ಸೂರು ಅಹಮ್ಮದ್, ಸಹಾಯಕ ಲೋಕೇಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗೂಡ್ಸ್ ವಾಹನದಲ್ಲಿ ರಾಸುಗಳಿಗೆ ಯಾವುದೇ ರೀತಿಯಲ್ಲಿ ಗಾಳಿ, ಬೆಳಕು ಹಾಗೂ ಆಹಾರ ನೀಡದೆ ಹಿಂಸಾತ್ಮಕವಾಗಿ ಕಾನೂನು ಬಾಹಿರವಾಗಿ ಕಸಾಯಿಖಾನೆಗೆ ಮಾಂಸದ ಉದ್ದೇಶದಿಂದ 30ಕ್ಕೂ ಹೆಚ್ಚು ಗೋವುಗಳ ಸಾಗಣೆ ಮಾಡಲಾಗುತ್ತಿತ್ತು. ಇದರ ಖಚಿತ ಸುಳಿವು ದೊರೆತ ಪುನೀತ್ ಹಾಗೂ ತಂಡದವರು ಪಟ್ಟಣದ ಪ್ರವಾಸಿ ಮಂದಿರದ ಬಳಿ ವಾಹನ ತಡೆದು ಪರಿಶೀಲನೆ ನಡೆಸಿದ ವೇಳೆ ಈ ಅಕ್ರಮ ಸಾಗಣೆ ಬೆಳಕಿಗೆ ಬಂದಿದೆ. ವಾಹನವನ್ನು ಪಟ್ಟಣದ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.