ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಚರ್ಚೆ ನಡೆಸಿದರು. ಜಯಂತಿ ಶಿವಕುಮಾರ್, ಮೋಹಿನಿ, ಮಹೇಶ್, ಕೃಷ್ಣಪ್ರಸಾದ್ ಇದ್ದರು. 
ಜಿಲ್ಲೆ

ಪಟ್ಟಣ ಪಂಚಾಯಿತಿ ಆಸ್ತಿ ರಕ್ಷಿಸಿ

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ಜಾಗದ ಹದ್ದುಬಸ್ತು ಗುರುತಿಸಬೇಕು. ಒತ್ತುವರಿ ತಡೆಯಬೇಕು. ಪಂಚಾಯಿತಿ ಸೇರಿದ ವಾಣಿಜ್ಯ ಮಳಿಗೆಗಳಿಗೆ ಪಂಚಾಯಿತಿ ಆಸ್ತಿ ಎಂದು ನಾಮಫಲಕ ಅಳವಡಿಸಬೇಕು ಎಂದು ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ ಒತ್ತಾಯಿಸಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಕೆಲವು ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.

ಪಂಚಾಯಿತಿ ಮಳಿಗೆಗಳು ಖಾಸಗಿ ಆಸ್ತಿ ಎಂದು ಕೆಲವರು ಭಾವಿಸಿದ್ದಾರೆ. ಪಂಚಾಯಿತಿ ಸೇರಿದ ಜಾಗದ ರಕ್ಷಣೆಯನ್ನು ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು. ಪಟ್ಟಣದೊಳಗೆ ಬೀದಿನಾಯಿಗಳು ಹಾಗೂ ಬೀಡಾಡಿ ದನಗಳ ಹಾವಳಿ ಮೀತಿ ಮೀರಿದೆ. ಶಾಲಾ ಮಕ್ಕಳು ನಡೆದುಕೊಂಡು ಹೋಗುವಾಗ ಬೀದಿನಾಯಿಗಳು ಮಕ್ಕಳನ್ನು ಹಿಂಬಾಲಿಸುತ್ತಿರುತ್ತವೆ. ಅನಾಹುತ ಸಂಭವಿಸುವ ಮೊದಲು ಕ್ರಮ ಕೈಗೊಳ್ಳಿ ಎಂದು ಶೀಲಾ ಆಗ್ರಹಿಸಿದರು. ಬೀದಿನಾಯಿಗಳನ್ನು ನಿಯಂತ್ರಣ ಮಾಡಲು ಸರ್ಕಾರದ ಕೆಲವು ಕಟ್ಟುನಿಟ್ಟಿನ ನಿಯಮಗಳಿವೆ. ಅದನ್ನು ಪಾಲಿಸಿ ನಿಯಂತ್ರಣಕ್ಕೆ ಕ್ರಮ ಜರುಗಿಸಲಾಗವುದು ಎಂದು ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಹೇಳಿದರು.

ಪಟ್ಟಣದ ಮಾರುಕಟ್ಟೆ ಪ್ರಾಂಗಣದಲ್ಲಿ ವಾಹನಗಳ ಪಾರ್ಕಿಂಗ್ ಸೇರಿದಂತೆ ಹೈಟೆಕ್ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನಾ ವರದಿ ಸಿದ್ಧವಾಗಿದೆ. ಕ್ರೀಯಾಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಶಾಸಕ ಡಾ.ಮಂತರ್‌ಗೌಡ ಅವರೊಂದಿಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಮುಖ್ಯಾಧಿಕಾರಿ ಸಭೆಯ ಗಮನಕ್ಕೆ ತಂದರು.

ಪಟ್ಟಣದ ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ಗಮನಹರಿಸಬೇಕು. ವಾರಕೊಮ್ಮೆಯಾದರೂ ವಾರ್ಡ್‌ಗಳ ಸ್ವಚ್ಛತೆಯಾಗಬೇಕು. ಚರಂಡಿ, ರಸ್ತೆ ಸ್ವಚ್ಛ ಮಾಡದಿದ್ದರೆ ಜನರು ನಮ್ಮನ್ನು ರಸ್ತೆಯಲ್ಲೇ ಪ್ರಶ್ನೆ ಮಾಡುತ್ತಾರೆ. ಸದಸ್ಯರು ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದೇವೆ ಎಂದು ಸದಸ್ಯರಾದ ಶುಭಕರ್, ನಾಗರತ್ನಾ, ಜೀವನ್ ಪ್ರಶ್ನಿಸಿದರು. 11 ವಾರ್ಡ್‌ಗಳ ಸ್ವಚ್ಛತೆಗೆ 9 ಜನ ಪೌರಕಾರ್ಮಿಕರಿದ್ದಾರೆ. ಪಟ್ಟಣದ ಹೃದಯ ಭಾಗವನ್ನು ಪ್ರತಿದಿನ ಸ್ವಚ್ಛ ಮಾಡಬೇಕು. ವಾರ್ಡ್‌ಗಳ ಸ್ವಚ್ಛತೆಗೆ ಅದ್ಯತೆ ನೀಡಲಾಗುತ್ತದೆ ಎಂದು ಅರೋಗ್ಯ ನಿರೀಕ್ಷಕ ಜಾಸಿಂ ಖಾನ್ ಹೇಳಿದರು.

ಎಸ್‌ಸಿ, ಎಸ್‌ಟಿ ಜನಾಂಗದವರಿಗೆ ಮೀಸಲಾದ ಅನುದಾನವನ್ನು ನಿಜವಾದ ಫಲಾನುಭವಿಗಳಿಗೆ ನೀಡಬೇಕು. ಎಂದು ನಾಮ ನಿರ್ದೇಶನ ಸದಸ್ಯ ಎಚ್.ಎ.ನಾಗರಾಜು ಹೇಳಿದರು.

ಯೋಜನೆ ಅನುದಾನದಲ್ಲಿ ಫಲಾನುಭವಿಗಳು ಕೇಳಿದ ವಸ್ತುಗಳನ್ನು ಖರೀದಿ ಮಾಡಿ ಕೊಡಬೇಕು. ಬ್ಯಾಂಕ್‌ನವರು ಸಾಲವನ್ನಂತೂ ಬಡವರಿಗೆ ಕೊಡುವುದಿಲ್ಲ ಎಂದು ಹೇಳಿದರು.

ನಿಮ್ಮ ಬೇಡಿಕೆಯನ್ನು ಪರಿಶೀಲಿಸಿ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.

ಸಭೆಯಲ್ಲಿ ಉಪಾಧ್ಯಕ್ಷೆ ಮೋಹಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮಹೇಶ್, ಸದಸ್ಯರಾದ ಬಿ.ಸಂಜೀವ, ಬಿ.ಸಿ.ವೆಂಕಟೇಶ್, ಪಿ.ಕೆ.ಚಂದ್ರು, ವಿನಯ್, ಮೃತ್ಯುಂಜಯ, ಇಂಜಿನಿಯರ್ ಹೇಮಕುಮಾರ್, ವಿಷಯ ಸಂಗ್ರಹಕಿ ರೂಪಾ ಇದ್ದರು.