ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ನೂತನ ಅಗ್ನಿಶಾಮಕ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ, ಶಾಸಕ ಭೀಮಸೇನ ಚಿಮ್ಮನಕಟ್ಟಿ ಇತರರಿದ್ದಾರೆ. 
ಜಿಲ್ಲೆ

ಕಷ್ಟದಲ್ಲಿರುವವರಿಗೆ ರಕ್ಷಣೆ ನೀಡಿ

ದತ್ತಾತ್ರೇಯ ಪಿ ಕುಲಕರ್ಣಿ

ಬಾದಾಮಿ: ಅಗ್ನಿಶಾಮಕದ ಜತೆಗೆ ತುರ್ತು ಸೇವೆ ಅಂಥ ಇದೆ. ಬರಿ ಬೆಂಕಿ ನಂದಿಸುವ ಕೆಲಸ ಇವರದಲ್ಲ. ಜನ ಕಷ್ಟದಲ್ಲಿ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ರಕ್ಷಣೆ ಮಾಡುವ ದೊಡ್ಡ ಜವಾಬ್ದಾರಿ ಅಗ್ನಿಶಾಮಕ ಇಲಾಖೆಗೆ ಇದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ಪಟ್ಟಣದ ಬನಶಂಕರಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಠಾಣೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿ ತಾಲೂಕಿಗೊಂದು ಅಗ್ನಿಶಾಮಕ ಠಾಣೆ ಮಾಡುವ ಗುರಿ ಹೊಂದಿದ್ದೇವೆ ಎಂದರು.

ಪೊಲೀಸ್ ಇಲಾಖೆ ಜನಸ್ನೇಹಿ ಆಗಬೇಕು. ಪೊಲೀಸ್ ಸ್ಟೇಷನ್‌ಗೆ ಬರಲು ಜನ ಹೆದರಬಾರದು. ಜನ ಪೊಲೀಸ್ ಸ್ಟೇಷನ್‌ಗೆ ಹೋಗಿ ತಮ್ಮ ಕಷ್ಟಗಳನ್ನು ಹೇಳಿ ಪರಿಹಾರ ಮಾಡಿಕೊಳ್ಳಲು ಕಲಿಯಬೇಕು ಎಂದರು.

ಬಾದಾಮಿ ಐತಿಹಾಸಿಕ ಕ್ಷೇತ್ರ 1500 ವರ್ಷಗಳ ಇತಿಹಾಸವಿದೆ. ಇಲ್ಲಿ ಇರುವ ಮೂರು ಗುಹೆಗಳನ್ನು ನೋಡಿ, ಅದರಲ್ಲಿ ಎರಡು ಹಿಂದು ಧರ್ಮದ ದೇವಾಲಯಗಳ ಗುಹೆಗಳು ಹಾಗೂ ಒಂದು ಜೈನ ಧರ್ಮದ ಗುಹೆಯಿದೆ. ಆಗಲೂ ಅರಸರು ಸರ್ವಧರ್ಮ ಪ್ರೀತಿಸುತ್ತಿದ್ದರು ಎಂದರು.

ಈ ಕ್ಷೇತ್ರ ಇನ್ನೂ ಅಭಿವೃದ್ಧಿ ಆಗಬೇಕು. ಒಂದು ಸಾವಿರ ಕೋಟಿ ರೂಪಾಯಿಗಳ ಕ್ರಿಯಾ ಯೋಜನೆ ತಯಾರಿಸಿ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸೋಣ. ಚಾಲುಕ್ಯರ ಕಾಲದ ಗುಹಾಂತರ ದೇವಾಲಯಗಳ ಅಭಿವೃದ್ಧಿ ಮಾಡೋಣ ಎಂದು ಶಾಸಕರಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ಸೇನೆಯಲ್ಲಿರುವವರು ದೇಶ ಕಾಯುತ್ತಾರೆ. ಅಗ್ನಿಶಾಮಕ ಇಲಾಖೆಯವರು ಜನರ ರಕ್ಷಣೆ ಮಾಡುತ್ತಾರೆ. ಎರಡು ಇಲಾಖೆಯ ಸೇವೆ ಶ್ಲಾಘನೀಯ ಎಂದರು.

ಕರ್ನಾಟಕ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಪೊಲೀಸ್ ಉಪ ಮಹಾನಿರ್ದೇಶಕ ಡಾ. ರವಿ ಚನ್ನನ್ನವರ ಮಾತನಾಡಿ, ಪೊಲೀಸ್ ಠಾಣೆ ಎನ್ನುವುದು ನೊಂದವರ ಕಣ್ಣೀರು ಒರೆಸುವ ಸ್ಥಳವಾಗಬೇಕು. ಭರವಸೆಯ ಕೇಂದ್ರ ಆಗಬೇಕು. ಅಧಿಕಾರ ಗಾಯದ ಮೇಲೆ ಬರೆ ಹಾಕುವ ಸ್ಥಳ ಆಗಬಾರದು ಎಂದರು.

ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, 2026-17ನೇ ಸಾಲಿನಲ್ಲಿ ಅಗ್ನಿಶಾಮಕ ಠಾಣೆ ಮಂಜೂರಿ ಮಾಡಿ, ಈಗ ಅವರೇ ಉದ್ಘಾಟನೆ ಮಾಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ವೇದಿಕೆ ಮೇಲೆ ಜಮಖಂಡಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಅವಳಿ ಜಿಲ್ಲೆಯ ಹಾಲು ಒಕ್ಕೂಟದ ಅಧ್ಯಕ್ಷ ಈರಣ್ಣ ಕರಿಗೌಡರ, ಜಿಲ್ಲಾ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಪುರಸಭೆ ಅಧ್ಯಕ್ಷ ಪಾಂಡು ಕಟ್ಟಿಮನಿ, ಪುರಸಭೆ ಸದಸ್ಯರಾದ ರಾಮವ್ವ ಮಾದರ, ಮಂಜುನಾಥ ಹೊಸಮನಿ, ಗೌರಮ್ಮ ಬೇಲೂರಪ್ಪನ್ನವರ, ಮುಖಂಡರಾದ ಮಹಾಂತೇಶ ಹಟ್ಟಿ ಇದ್ದರು.