ಶಿಡ್ಲಘಟ್ಟ ತಾಲೂಕಿನ ಬಸವಾಪಟ್ಟಣದಲ್ಲಿ ಬೆಂಗಳೂರು ಕೃಷಿ ವಿವಿ ಹಾಗೂ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಕೃಷಿ ವಸ್ತು ಪ್ರದರ್ಶನವನ್ನು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಉದ್ಘಾಟಿಸಿದರು. ತಹಸೀಲ್ದಾರ್ ಬಿ.ಎನ್.ಸ್ವಾಮಿ, ಚುನಾವಣೆ ಶಾಖೆ ತಹಸೀಲ್ದಾರ್ ಬಿ.ಕೆ.ಶ್ವೇತಾ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಇತರರು ಇದ್ದರು. 
ಜಿಲ್ಲೆ

ಮಣ್ಣಿನ ಫಲವತ್ತತೆ ಸಾರ ರಕ್ಷಿಸಿ

ಎನ್.ವೆಂಕಟೇಶ್

ಡಿಸಿ ಪಿ.ಎನ್.ರವೀಂದ್ರ ಸಲಹೆ- ಲಾಭದ ಆಸೆಯಲ್ಲಿ ರಾಸಾಯನಿಕ ಗೊಬ್ಬರ ಬಳಕೆ

ಶಿಡ್ಲಘಟ್ಟ: ನೂತನ ತಾಂತ್ರಿಕತೆ ಹಾಗೂ ಉತ್ತಮ ತಳಿಜ್ಞಾನ ಬಳಸಿಕೊಂಡು ಹೆಚ್ಚು ಇಳುವರಿ ಪಡೆಯುವ ಜತೆಗೆ ಮಣ್ಣಿನ ಲವತ್ತತೆಯ ಸಾರವನ್ನು ರಕ್ಷಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿ ನಾವಿದ್ದೇವೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ತಾಲೂಕಿನ ಮಳಮಾಚನಹಳ್ಳಿ ಗ್ರಾಪಂ ವ್ಯಾಪ್ತಿಯ ಬಸವಾಪಟ್ಟಣದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಹಾಗೂ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ವತಿಯಿಂದ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿ ಗುರುವಾರ ಹಮ್ಮಿಕೊಂಡಿದ್ದ ಕೃಷಿ ವಸ್ತು ಪ್ರದರ್ಶನ-2024 ಉದ್ಘಾಟಿಸಿ ಮಾತನಾಡಿದರು.

ಮಣ್ಣಿನ ಲವತ್ತತೆ ಹಾಗೂ ಸಾರದ ಬಗ್ಗೆ ವಿದ್ಯಾರ್ಥಿಗಳು ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಬೇಕು. ಜೈವಿಕ ಗೊಬ್ಬರದ ಜತೆಗೆ ಬೀಜೋಪಚಾರ ಪದ್ಧತಿಗಳ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮಸ್ಥರ ಸಹಕಾರದಿಂದ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಕೃಷಿ ವಸ್ತು ಪ್ರದರ್ಶನವು ವಿದ್ಯಾರ್ಥಿಗಳ ಕಲಿಕೆ ಹಾಗೂ ಕೃಷಿಕರ ಬದುಕಿಗೆ ನೆರವಾಗಬೇಕು. ಕೃಷಿಯಲ್ಲಿ ಬದಲಾವಣೆ ತರಬೇಕು, ಭೂಮಿಯ ಫಲವತ್ತತೆಯನ್ನು ಉಳಿಸಿಕೊಂಡು ಉತ್ತಮ ಫಸಲನ್ನು ಪಡೆಯುವಂತಾಗಬೇಕು ಎಂದು ಆಶಿಸಿದರು.

ಕೃಷಿ ವಿಶ್ವ ವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ಮಾತನಾಡಿ, ಕೋಲಾರ - ಚಿಕ್ಕಬಳ್ಳಾಪುರ ಭಾಗದ ರೈತರು ಯಾವ ಕೃಷಿ ವಿಜ್ಞಾನಿ, ತಜ್ಞರಿಗಿಂತಲೂ ಕಡಿಮೆ ಇಲ್ಲ. ಅವರಲ್ಲಿ ಕೃಷಿ ಮಾಡುವ ಉತ್ಸಾಹ, ಇಚ್ಛೆ, ಹೊಸ ಪ್ರಯೋಗಗಳಿಗೆ ಯಾರೂ ಸರಿ ಸಾಟಿ ಇಲ್ಲ ಎಂದರು.

ನೂತನ ತಂತ್ರಜ್ಞಾನಗಳ ವಿಷಯದ ಮೇಲೆ ವಸ್ತು ಪ್ರದರ್ಶನ ನಡೆಯಿತು. ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಹೈನುಗಾರಿಕೆ, ಅರಣ್ಯ

ಹಾಗೂ ಪಶು ಸಂಗೋಪನೆ ಇಲಾಖೆ ಸೇರಿ ಅನೇಕ ಇಲಾಖೆಗಳಿಂದ ವಸ್ತುಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳು ರೈತರಿಗೆ ಮಾಹಿತಿ ನೀಡಿದರು. ಮಳಮಾಚನಹಳ್ಳಿ ಗ್ರಾಪಂ ವ್ಯಾಪ್ತಿಯ ಎಲ್ಲ ಶಾಲೆಗಳ ವಿದ್ಯಾರ್ಥಿಗಳಿಗೂ ವಸ್ತು ಪ್ರದರ್ಶನ ವೀಕ್ಷಿಸಿದರು.

ತಹಸೀಲ್ದಾರ್ ಬಿ.ಎನ್.ಸ್ವಾಮಿ, ಚುನಾವಣೆ ಶಾಖೆ ತಹಸೀಲ್ದಾರ್ ಬಿ.ಕೆ.ಶ್ವೇತಾ, ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಗ್ರಾಮೀಣ ಕೃಷಿ ಕಾರ್ಯಾನುಭವ

ಕಾರ್ಯಕ್ರಮ ಸಂಯೋಜಕ ಡಾ.ಎಂ.ವಿ.ಶ್ರೀನಿವಾಸರೆಡ್ಡಿ, ಡೀನ್ ಡಾ.ಪಿ.ವೆಂಕಟರಮಣ, ಹೈನುಗಾರಿಕೆ ವಿಭಾಗದ ಪ್ರಾಧ್ಯಾಪಕ ಡಾ.ಸುರೇಶ್, ಉಪ ಕೃಷಿ ನಿರ್ದೇಶಕಿ ಮಂಜುಳಾ, ಮಳಮಾಚನಹಳ್ಳಿ

ಪಶು ಆಸ್ಪತ್ರೆಯ ಡಾ.ಧನಂಜಯ್, ರೇಷ್ಮೆಗೂಡು ಮಾರುಕಟ್ಟೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ರೇಷ್ಮೆ ಇಲಾಖೆಯ ಅಸ್ಲಂಪಾಷಾ, ಕೃಷಿ ಇಲಾಖೆ ಶಿವಕುಮಾರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಹಣ್ಣು ತರಕಾರಿಗಳಲ್ಲಿ ರಾಸಾಯನಿಕ ಅಂಶ ಹೆಚ್ಚು

ಇತ್ತೀಚಿನ ದಿನಗಳಲ್ಲಿ ಕಡಿಮೆ ಅವಧಿ, ಕಡಿಮೆ ಬಂಡವಾಳದೊಂದಿಗೆ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ತಳಿಯ ಬೀಜ ಬಿತ್ತಿ ಹೆಚ್ಚಿನ ಫಸಲು ತೆಗೆಯಲಾಗುತ್ತಿದೆ. ಆರ್ಥಿಕವಾಗಿಯೂ ಲಾಭವಾಗುತ್ತಿದೆ. ಇದು ಸಂತೋಷದ ವಿಚಾರ. ಆದರೆ, ಈ ಭರದಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚುತ್ತಿದ್ದು, ಭೂಮಿಯ ಫಲವತ್ತತೆಯ ಸಾರ ಕ್ಷೀಣಿಸುತ್ತಿದೆ. ಇದರಿಂದ ಭೂಮಿ ಬರಡಾಗುತ್ತಿದ್ದು, ಅಲ್ಲಿ ಬೆಳೆಯುತ್ತಿರುವ ಹಣ್ಣು, ತರಕಾರಿಗಳಲ್ಲಿ ರಾಸಾಯನಿಕ ಅಂಶಗಳೇ ಹೆಚ್ಚಿರುತ್ತಿವೆ. ಇದನ್ನು ಸೇವಿಸುವ ಎಲ್ಲರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಪಿ.ಎನ್. ರವೀಂದ್ರ ಹೇಳಿದರು.