ಚಿಕ್ಕಬಳ್ಳಾಪುರ: ಬಾಲಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆ ಕೈಗೊಳ್ಳಲು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಹಾಗೂ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ವಿವಿಧೆಡೆ ಕಾಲಕಾಲಕ್ಕೆ ಅನಿರೀಕ್ಷಿತ ದಾಳಿಗಳನ್ನು ಕೈಗೊಂಡು ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ರಕ್ಷಿಸಬೇಕು. ಅವರನ್ನು ಶಿಕ್ಷಣ ವಂಚಿತರಾಗದಂತೆ ನೋಡಿಕೊಳ್ಳಬೇಕು. ಆಗ ಮಾತ್ರ ಬಾಲಕಾರ್ಮಿಕ ವಿರೋಧಿ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಪ್ಯಾನ್ ಇಂಡಿಯಾ ಕಾರ್ಯಕ್ರಮದಡಿ ಜಿಲ್ಲಾಡಳಿತ ವಿವಿಧ ಚಟುವಟಿಕೆಯನ್ನು ಹಮ್ಮಿಕೊಂಡಿದೆ. ಜಿಲ್ಲಾದ್ಯಂತ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕರಪತ್ರ ವಿತರಣೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವಾ ಸಮಿತಿ ಮೂಲಕ ಬಾಲ ಕಾರ್ಮಿಕ ಕಾಯ್ದೆ ಮತ್ತು ಕಾನೂನು ಅರಿವು ನೆರವು ಕಾರ್ಯಕ್ರಮವೂ ಸೇರಿದೆ ಎಂದರು.
ಜಿಪಂ ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಆರ್. ವರಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವೆಂಕಟೇಶ್ ರೆಡ್ಡಿ ಮತ್ತಿತರರು ಇದ್ದರು.
ಯೋಜನಾ ಸಂಘ ನವೀಕರಣ
ಸಭೆಯಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘವನ್ನು ನವೀಕರಿಸಲು ಅನುಮೋದನೆ ಪಡೆಯಲಾಯಿತು. 2024-25ನೇ ಸಾಲಿನ ಕಾರ್ಯ ಪ್ರಗತಿಯ ವಿಷಯಗಳನ್ನು ಮಂಡಿಸಿದ ಬಳಿಕ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಜಿಲ್ಲಾಮಟ್ಟದ ಕಾರ್ಯಕಾರಿ ಸಮಿತಿ ಸದಸ್ಯರ ಹಾಗೂ ಕಾರ್ಯಪಡೆ ಪ್ರತಿನಿಧಿಗಳ ಸಲಹೆಗಳನ್ನು ಪಡೆಯಲಾಯಿತು. ಬಾಲಕಾರ್ಮಿಕ ಯೋಜನಾ ಸಂಘದ 2023-24ನೇ ಸಾಲಿನ ಆಡಿಟ್ ವರದಿ ಕುರಿತು ಚರ್ಚಿಸಿ, ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಜಾಗೃತಿ ಕರಪತ್ರ ಮತ್ತು ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
12ಕ್ಕೆ ಜಾಗೃತಿ ಜಾಥಾ
ಜಿಲ್ಲಾ ಕೇಂದ್ರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಜೂ.12ರಂದು ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಿಂದ ಆರಂಭವಾಗಲಿರುವ ಜಾಗೃತಿ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿದೆ. ಬಾಲ ಕಾರ್ಮಿಕ ಪದ್ದತಿ ದುಷ್ಪರಿಣಾಮ ಮತ್ತು ನಿರ್ಮೂಲನೆಯ ಬಗ್ಗೆ ಜಾಗೃತಿ ಮೂಡಿಸಲು ಅರ್ಥಪೂರ್ಣವಾಗಿ ಕಾರ್ಯಕ್ರಮ ಆಯೋಜಿಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಇಲಾಖೆಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.