ಮೈಸೂರು: ಮಹಿಳೆ ಮತ್ತು ಪುರುಷರಿಗೆ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಆರ್ಥಿಕತೆಯಲ್ಲಿ ಲಿಂಗ ತಾರತಮ್ಯ ಮಾಡದಂತೆ ಸಂವಿಧಾನದಲ್ಲಿ ಉಲ್ಲೇಖಿಸಿದ್ದರೂ ಮಹಿಳಾ ಕೃಷಿ ಕಾರ್ಮಿಕರಿಗೆ ಕೂಲಿಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಮಂಡ್ಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅಭಿಯೋಜಕಿ ಜಯಶ್ರೀ ಎಸ್.ಶೆಣೈ ಬೇಸರ ವ್ಯಕ್ತಪಡಿಸಿದರು.
ಪ್ರಜಾಪಿತ ಬಹ್ಮಾಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ಯಾದವಗಿರಿಯ ಜ್ಞಾನಪ್ರಕಾಶ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಜಾಪಿತ ಬ್ರಹ್ಮಾ ಅವರ 56ನೇ ಅವ್ಯಕ್ತ ಪುಣ್ಯ ಸ್ಮೃತಿ ದಿನದ ಪ್ರಯುಕ್ತ ವಿಶ್ವ ಶಾಂತಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದಲ್ಲಿ ಮಹಿಳೆ ಮತ್ತು ಪುರುಷರು ಒಂದೇ ಎಂಬ ವ್ಯಾಖ್ಯಾನವಿದ್ದರೂ ಇಂದಿಗೂ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮಹಿಳಾ ಕೃಷಿ ಕಾರ್ಮಿಕರಿಗೆ ನೀಡುವ ಕೂಲಿಯಲ್ಲಿ ತಾರತಮ್ಯವಿದೆ. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಕೋರಿದರು.
ಜಮೀನ ಮಾಲೀಕರು ಪುರುಷ ಕೃಷಿ ಕಾರ್ಮಿಕರಿಗೆ ಹೆಚ್ಚಿನ ಕೂಲಿ ನೀಡುತ್ತಾರೆ. ಆದರೆ ಮಹಿಳಾ ಕಾರ್ಮಿಕರು ಪುರುಷರಷ್ಟೇ ಸರಿಸಮಾನ ಕೆಲಸ ಮಾಡಿದರೂ ಕಡಿಮೆ ಕೂಲಿ ನೀಡುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣಿನ ಮೇಲಾಗುತ್ತಿರುವ ದೌರ್ಜನ್ಯ ತಪ್ಪಿಸಲು ಎಲ್ಲರೂ ಧ್ವನಿಗೂಡಿಸಬೇಕು ಎಂದು ಮನವಿ ಮಾಡಿದರು.
ಮನೆಯಲ್ಲಿ ಗಂಡ-ಹೆಂಡತಿ ಪರಸ್ಪರ ಅರಿತು ಬಾಳ್ವೆ ನಡೆಸಿದರೆ, ಬಹುತೇಕ ಸಂಸಾರದ ತಾಳ-ಮೇಳ ಸರಿಯಾಗಿರುತ್ತದೆ. ಇಂತಹ ವಿಷಯಗಲ್ಲಿ ಮನಸ್ಸಿನ ಕೆಟ್ಟ ಆಲೋಚನೆಗಳಿಗೆ ನಿಗ್ರಹ ಬಹಳ ಮುಖ್ಯ. ನಾವು ನಿತ್ಯ ಕೆಲಸದಲ್ಲಿ ತಲ್ಲಿನಗೊಂಡಾಗ ನಮಗೆ ತಿಳಿಯದ ಹಾಗೆ ಕೋಪಗೊಳ್ಳುತ್ತೇವೆ. ಭ್ರಮನಿರಸನಗೊಳ್ಳುತ್ತೇವೆ. ಸಂದರ್ಭಕ್ಕೆ ಅನುಸಾರ ಮತ್ತೊಬ್ಬರ ಸಾಧನೆ, ಬೆಳವಣಿಗೆ ನೋಡಿ ಈರ್ಶೆ ಬೆಳೆಸಿಕೊಳ್ಳುತ್ತೇವೆ. ಇಂತಹ ಮನಸ್ಸಿನ ಆಲೋಚನೆಗಳು ನಮ್ಮ ವ್ಯಕ್ತಿತ್ವ ಕುಂದು ತರವಂತಹದ್ದು ಎಂದರು.
ದಂಪತಿ ನಡುವೆ ನಡಯುವ ಸಣ್ಣಸಣ್ಣ ವಿಚಾರಗಳಿಗೂ ವಿಚ್ಛೇದನ ನೀಡುವಂತೆ ಕೌಟುಂಬಿಕ ನ್ಯಾಯಾಲಯಗಳಲ್ಲಿ ಇತ್ತೀಚೆಗೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಸಂಸಾರದಲ್ಲಿ ದಂಪತಿಗಳ ನಡುವೆ ಪರಸ್ಪರ ಸಾಮರಸ್ಯ ಮೂಡಿದರೆ, ವಿರಸ ಕಡಿಮೆಯಾಗುತ್ತಿವೆ. ಇದಕ್ಕೆ ಈಶ್ವರಿ ವಿವಿಯಲ್ಲಿ ಹೇಳಿಕೊಡುವ ರಾಜಯೋಗ ಬದುಕಿನ ನಿರ್ವಹಣೆಗೆ ಅನುಕೂಲವಾಗಬಹುದು ಎಂದು ಸಲಹೆ ನೀಡಿದರು.
ಪ್ರಜಾಪಿತ ಬಹ್ಮಾಕುಮಾರಿ ಸಮಾಜದವರು ಎಷ್ಟೇ ಒತ್ತಡವಿದ್ದರೂ ಶಾಂತಚಿತ್ತದಿಂದ ನಡೆದುಕೊಳ್ಳುತ್ತಾರೆ. ಅವರು ಮನಸ್ಸು ನಿಗ್ರಹಿಸುವ ಕ್ರಮಕ್ಕೆ ಬೆರಗಾಗಿದ್ದೇನೆ. ರಾಜಯೋಗ ಉತ್ತಮ ಯೋಗವಾಗಿದೆ. ಮಹಿಳೆಯರೇ ಹೆಚ್ಚಾಗಿ ಈ ಸಂಸ್ಥೆಯಲ್ಲಿ ಇರುವುದು ಸಂತೋಷದ ಸಂಗತಿ ಎಂದರು.
ಈಶ್ವರೀಯ ವಿಶ್ವ ವಿದ್ಯಾಲಯ ಮೈಸೂರು ಉಪ ವಲಯದ ಮುಖ್ಯ ಸಂಚಾಲಕರಾದ ರಾಜಯೋಗಿನಿ ಲಕ್ಷ್ಮೀಜಿ, ಪೌಷ್ಠಿಕ ತಜ್ಞ ಡಾ.ಖಾದರ್‌ವಲಿ, ಮೈಸೂರು ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ.ಸಿ.ಕೆ.ರೇಣುಕಾರ್ಯ, ಬ್ರಹ್ಮಕುಮಾರ ರಂಗನಾಥ, ಬ್ರಹ್ಮಾಕುಮಾರಿ ಶಾರದಮ್ಮ, ನಿವೃತ್ತ ಡಿವೈಎಸ್ಪಿ ಕೃಷ್ಣಮೂರ್ತಿ ಇತರರು ಇದ್ದರು.