ಕೋಲಾರ: ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಕೇರ್ ಆ್ ಅಡ್ರಸ್ ಆಗಿದ್ದು, ರಾಜ್ಯಪಾಲರು ದ್ವೇಷರಾಜಕಾರಣ ಮಾಡುತ್ತಿದ್ದಾರೆ ಎಂಬುದರಲ್ಲಿ ಅರ್ಥವಿಲ್ಲ. ಸಿಎಂ ವಿರುದ್ಧ ದಾಖಲೆಗಳು ಸಿಕ್ಕಿರುವುದರಿಂದಲೇ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದಾರೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.
ನಗರದಲ್ಲಿ ಶನಿವಾರ ಕೋಲಾರಮ್ಮ ದೇವಿಗೆ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಭ್ರಷ್ಟಾಚಾರ ಜಗಜ್ಜಾಹಿರಾಗಿದೆ. ಮುಡಾ ಮಾತ್ರವಲ್ಲದೆ, ವಾಲ್ಮೀಕಿ ಮತ್ತೀತರ ನಿಗಮಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
ತಪ್ಪು ಮಾಡಿದವರು ಎಷ್ಟೇ ದೊಡ್ಡವರಾಗಿದ್ದರು ಕಾನೂನಿಗೆ ತಲೆಬಾಗಲೇಬೇಕು. ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿರುವುದು ಅಂಬೇಡ್ಕರ್ ರಚಿಸಿರುವ ಸಂವಿಧಾನಕ್ಕೆ ಸಿಕ್ಕಿರುವ ಜಯ. ಸಿದ್ದರಾಮಯ್ಯರಿಗೆ ಮಾನ ಮರ್ಯಾದೆ ಇದ್ದರೆ ಭಂಡತನ ಬಿಟ್ಟು ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿರುವುದು 187 ಕೋಟಿ ರೂ. ಅಲ್ಲ, 89 ಕೋಟಿ ಎಂದು ಸದನದಲ್ಲಿ ಸಿಎಂ ಅವರೇ ಒಪ್ಪಿಕೊಂಡಿದ್ದಾರೆ. ನಿಗಮದ ಹಣವನ್ನು ಜ್ಯೂವೆಲರಿ ಶಾಪ್, ಸಾರಾಯಿ ಅಂಗಡಿಗಳಿಗೆ, ನಕಲಿ ಖಾತೆಗಳಿಗೆ, ಹೊರ ರಾಜ್ಯದ ಸೊಸೈಟಿಗಳಿಗೆ ಹಸ್ತಾಂತರಿಸಿರುವುದು ಈಗಾಗಲೇ ಸಾಬೀತಾಗಿದೆ. ಕಪ್ಪು ಚುಕ್ಕೆ ಇಲ್ಲದ ಆಡಳಿತ ಸಿದ್ದರಾಮಯ್ಯನವರದ್ದು ಅಲ್ಲ ಇಡೀ ಮೈಯಲ್ಲಾ ಕಪ್ಪು ಚುಕ್ಕೆಗಳು ತುಂಬಿವೆ ಎಂಬುದನ್ನು ಈ ಹಗರಣಗಳು ಸಾಬೀತು ಮಾಡಿವೆ. ಓರ್ವ ಮಂತ್ರಿ ಜೈಲಿಗೆ ಹೋಗಿದ್ದಾರೆ, ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಭ್ರಷ್ಟಾಚಾರ ಹೊರ ಬರುತ್ತಿದ್ದಂತೆ ಬಿಜೆಪಿಯನ್ನು ಬ್ಲಾಕ್ ಮೇಲ್ ಮಾಡಲು ಹೊರಟರು, ವರ್ಷದಿಂದ ಇವರದ್ದೇ ಸರ್ಕಾರ ಇತ್ತು ಏಕೆ ಕ್ರಮಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಗೆದ್ದಾಗ ಇವಿಎಂ ಕುರಿತು ಚಕಾರ ಎತ್ತಲ್ಲ, ಸೋತಾಗ ಇವಿಎಂ ಸರಿಯಿಲ್ಲ ಎಂದು ದೂರುತ್ತಾರೆ ಇವರ ಬಂಡವಾಳ ರಾಜ್ಯದ ಜನತೆಗೆ ಗೊತ್ತಾಗಿದೆ ಎಂದು ಗುಡುಗಿದರು. ನಗರಸಭಾ ಸದಸ್ಯ ಪ್ರವಿಣ್ಗೌಡ, ದಿಶಾ ಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ ಇದ್ದರು.