ಕೊಪ್ಪದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಪಪಂ ಅಧ್ಯಕ್ಷೆ ಗಾಯತ್ರಿ ವಸಂತ್ ಉದ್ಘಾಟಿಸಿದರು. ಲಿಖಿತಾ ಮೋಹನ್, ಧನಂಜಯಮೂರ್ತಿ, ಬಿ.ಪಿ.ಚಿಂತನ್, ಎನ್.ಟಿ.ಗೋಪಾಲಕೃಷ್ಣ ಇತರರಿದ್ದರು.  
ಜಿಲ್ಲೆ

ಮಹರ್ಷಿಯಿಂದ ಅಹಿಂಸೆ ಪ್ರತಿಪಾದನೆ

ಕೊಪ್ಪ: ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಜಗತ್ತಿಗೆ ಶಾಂತಿ ಸಂದೇಶ ಸಾರಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಧನಂಜಯಮೂರ್ತಿ ಹೇಳಿದರು.

ಪುರಭವನದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನ ಯಾವುದೇ ಮಹಾಕಾವ್ಯ ಮನುಷ್ಯ ಮನುಷ್ಯನನ್ನು ಕೊಲ್ಲುವುದಕ್ಕೆ ವಿರುದ್ಧವಾಗಿದೆ. ಕವಿಯೊಬ್ಬ ನಾಗರಿಕ ಸಮಾಜ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತಿರುತ್ತಾನೆ. ವಾಲ್ಮೀಕಿ ರಾಮಾಯಣದ ಮೊದಲ ವಾಕ್ಯವೇ ಯುದ್ಧ ವಿರೋಧಿಯಾಗಿದೆ. ನಾವು ಮಾಡುವ ಹಿಂಸೆಗೆ ನಾವೇ ಅವಮಾನ ಪಟ್ಟುಕೊಳ್ಳಲಿಲ್ಲ ಎಂದರೆ ಅದಕ್ಕಿಂತ ಹೇಯ ಕೃತ್ಯ ಬೇರೊಂದಿಲ್ಲ ಎಂಬುದಾಗಿ ತಿಳಿಸಿದ್ದಾರೆ ಎಂದರು.
ಜೀವನ ದುಃಖಮಯವಾಗಿದೆ ಎಂದು ವಾಲ್ಮೀಕಿ ಹೇಳಿದರೆ, ಅದನ್ನು ವಿಸ್ತರಿಸಿರುವ ಬುದ್ಧ ವಾಸ್ತವ ಅರಿತುಕೊಳ್ಳಿ ಎಂದಿದ್ದಾನೆ. ರಾಮಾಯಣದ ಮೂಲಕ ವಾಲ್ಮೀಕಿ ಕರ್ತವ್ಯನಿಷ್ಠೆ ಸಂದೇಶ ಸಾರಿದ್ದಾರೆ. ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾನುವಳ್ಳಿ ಗ್ರಾಪಂ ಸದಸ್ಯ ನವೀನ್ ಕರುವಾನೆ ಮಾತನಾಡಿ, ದೇಶದಲ್ಲಿ ಜಾತಿ ಹಿನ್ನೆಲೆಯಲ್ಲಿ ಜಯಂತಿ ಆಚರಣೆ ಮಾಡುವ ಹಂತಕ್ಕೆ ಬಂದು ತಲುಪಿದ್ದೇವೆ. ಮಹನೀಯರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ನಿಲ್ಲಬೇಕು ಎಂದರು.
ತಹಸೀಲ್ದಾರ್ ಲಿಖಿತಾ ಮೋಹನ್ ಮಾತನಾಡಿ, ವಾಲ್ಮೀಕಿ ರಾಮಾಯಣದ ಮೂಲಕ ಸಮಾಜಕ್ಕೆ ಪ್ರೀತಿ, ತ್ಯಾಗ ಇತ್ಯಾದಿ ಮಾನವೀಯ ಗುಣಗಳನ್ನು ಸಾರಿದ್ದಾರೆ ಎಂದು ತಿಳಿಸಿದರು.
ಶಾಸಕ ಟಿ.ಡಿ.ರಾಜೇಗೌಡ, ಅನಿವಾಸಿ ಭಾರತೀಯ ಕೋಶ ಉಪಾಧ್ಯಕ್ಷೆ ಆರತಿ ಕೃಷ್ಣ ಅವರು ವಾಲ್ಮೀಕಿ ಜಯಂತಿ ಕುರಿತು ಕಳುಹಿಸಿದ ಸಂದೇಶವನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎ.ಕೆ.ಪಾಟೀಲ್ ಓದಿದರು.
ಅಂತರ್ಜಾತಿ ವಿವಾಹವಾದ ದಂಪತಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಠೇವಣಿ ಬಾಂಡ್ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಪಪಂ ಅಧ್ಯಕ್ಷೆ ಗಾಯತ್ರಿ ವಸಂತ್, ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ, ಸದಸ್ಯೆ ಹೇಮಾವತಿ, ಡಿಎಸ್‌ಎಸ್ ರಾಜ್ಯ ಕಾರ್ಯಾಧ್ಯಕ್ಷ ರಾಜಶಂಕರ್, ಕೆಡಿಪಿ ಸದಸ್ಯ ಬಿ.ಪಿ.ಚಿಂತನ್, ಎನ್.ಟಿ.ಗೋಪಾಲಕೃಷ್ಣ ಇತರರಿದ್ದರು.