ಹುಬ್ಬಳ್ಳಿ : ರಾಜ್ಯದ ಸರ್ಕಾರಿ ವೈದ್ಯಕಿಯ ಕಾಲೇಜುಗಳ ಸೀಟ್ಗಳನ್ನು 800ಕ್ಕೆ ಹೆಚ್ಚಿಸಲು ಎನ್ಎಂಸಿ (ನ್ಯಾಷನಲ್ ಮೆಡಿಕಲ್ ಕಮಿಷನ್)ಗೆ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರಾದಲ್ಲಿ ಪ್ರತಿ ಕಾಲೇಜಿಗೆ 50 ಹೆಚ್ಚುವರಿ ವೈದ್ಯಕಿಯ ಸೀಟ್ಗಳು ಲಭಿಸಲಿವೆ ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದ್ದಾರೆ.
ಇಲ್ಲಿನ ಕೆಎಂಸಿಆರ್ಐನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರೊಂದಿಗೆ 750 ಪಿಜಿ ಸೀಟ್ಗಳನ್ನು ಹೆಚ್ಚಿಸುವಂತೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಪ್ರತಿಭಾವಂತ ವಿದ್ಯಾಥಿರ್ಗಳು ಕೂದಲೆಳೆ ಅಂತರದಲ್ಲಿ ವೈದ್ಯಕಿಯ ಸೀಟುಗಳಿಂದ ವಂಚಿತರಾಗುತ್ತಿದ್ದಾರೆ. ಅಂತವರು ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಲಾಂತರ ರೂ. ಖರ್ಚು ಮಾಡಿ ವೈದ್ಯಕಿಯ ಶಿಕ್ಷಣ ಪಡೆಯುವುದು ಕಷ್ಟವಾಗುತ್ತದೆ. ಇದನ್ನು ಮನಗಂಡು ಸರ್ಕಾರಿ ವೈದ್ಯಕಿಯ ಕಾಲೇಜುಗಳಲ್ಲಿನ ಸೀಟುಗಳನ್ನು ಹೆಚ್ಚಿಸಲು ಎನ್ಎಂಸಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲಿಯೂ ಸ್ಪಷ್ಟಪಡಿಸಲಾಗಿತ್ತು. ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಅವರು ಪ್ರಧಾನಿ ಅವರಲ್ಲಿ ಮನವಿ ಮಾಡಿದ್ದಾರೆ. ಸರ್ವಪಕ್ಷ ನಿಯೋಗದೊಂದಿಗೂ ಕೇಂದ್ರ ಸರ್ಕಾರವನ್ನು ಭೇಟಿಯಾಗಿದ್ದೇವೆ. ಇಡೀ ದೇಶದಲ್ಲಿ ಕೇರಳ ಮತ್ತು ಕರ್ನಾಟಕಕ್ಕೆ ಮಾತ್ರ ಏಮ್ಸ್ ಆಸ್ಪತ್ರೆ ಮಂಜೂರಾಗಿಲ್ಲ ಎಂದು ಹೇಳಿದರು.
ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಪ್ರತಿ ಜಿಲ್ಲೆಯಲ್ಲಿ ವೈದ್ಯಕಿಯ ಕಾಲೇಜು, ಕೆಲವೆಡೆ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ವೈದ್ಯಕಿಯ ಕಾಲೇಜುಗಳಲ್ಲಿನ ವೈದ್ಯರು ಬೆಳಗ್ಗೆ 9 ರಿಂದ ಮಧ್ಯಾಹ್ನ 4 ಗಂಟೆಯವರೆಗೆ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. 4 ಗಂಟೆಯ ಮೇಲೆ ಖಾಸಗಿ ಆಸ್ಪತ್ರೆಗಳಲ್ಲ ಕೆಲಸ ನಿರ್ವಹಿಸಲು ಯಾವುದೇ ಅಡ್ಡಿ ಇಲ್ಲ ಎಂದರು.
ಹುಬ್ಬಳ್ಳಿಯ ಕೆಎಂಸಿಆರ್ಐ ಸೇರಿದಂತೆ ಎಲ್ಲ ಸರ್ಕಾರಿ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಸಿಸಿಟಿವಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಹಾಜರಾತಿ ಅಳವಡಿಸಲಾಗಿದೆ. ಬೆಳಗ್ಗೆ 9, ಮಧ್ಯಾಹ್ನ 1, 2 ಹಾಗೂ 4 ಗಂಟೆಗೆ ಹಾಜರಾತಿ ಕಡ್ಡಾಯ. ಸಿಸಿಟಿವಿ ಕ್ಯಾಮರಾ ಹಾಗೂ ಬಯೋಮೆಟ್ರಿಕ್ ಹಾಜರಾತಿ ಆಧರಿಸಿ, ವೈದ್ಯರು ಹಾಗೂ ವೈದ್ಯಕಿಯೇತರ ಸಿಬ್ಬಂದಿಗೆ ವೇತನ ಪಾವತಿಸಲಾಗುತ್ತದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆ ಸೇರಿದಂತೆ ವೈದ್ಯಕಿಯ ಕಾಲೇಜುಗಳಲ್ಲಿನ ಆಸ್ಪತ್ರೆಗಳಲ್ಲಿ ಹೊರಗಿನ ಔಷಧಿ ಖರೀದಿಗೆ ಚೀಟಿ ಬರೆದುಕೊಡಲು ಅವಕಾಶ ಇಲ್ಲ. ಆಸ್ಪತ್ರೆ ಆವರಣದಲ್ಲಿ ಖಾಸಗಿ ಔಷಧಿ ಮಾರಾಟದ ಅಂಗಡಿಯಾಗಲಿ, ಜನೌಷಧಿಗಳಿಗಾಗಲಿ ಪರವಾನಿಗೆ ಇಲ್ಲ ಎಂದು ತಿಳಿಸಿದರು.
ಇನ್ನಷ್ಟು ಕೌಶಲಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಹುಬ್ಬಳ್ಳಿ, ಬೆಳಗಾವಿ, ಮೈಸೂರು, ಕೊಪ್ಪಳ ಹಾಗೂ ಕಲಬುಗಿರ್ಯಲ್ಲಿ ನಿರುದ್ಯೋಗಿಗಳಿಗೆ ಮಲ್ಟಿ ಸ್ಕಿಲ್ ಡೆವಲಪ್ಮೆಂಟ್, ಇಂಡಸ್ಟ್ರಿಯಲ್ ಸ್ಕಿಲ್ ಹಾಗೂ ಫ್ಯೂಚರ್ ಸ್ಕಿಲ್ ತರಬೇತಿ ನೀಡಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವರೂ ಆಗಿರುವ ಡಾ. ಶರಣಪ್ರಕಾಶ ಪಾಟೀಲ ಇದೇ ಸಂದರ್ಭದಲ್ಲಿ ಹೇಳಿದರು
ಹೆಸ್ಕಾಂ ಚೇರ್ಮನ್ ಅಜ್ಜಂಪೀರ್ ಖಾದ್ರಿ, ಕಿಮ್ಸ್ ನಿರ್ದೇಶಕ ಡಾ. ಎಸ್.ಎ್. ಕಮ್ಮಾರ ಹಾಗೂ ಇತರರು ಇದ್ದರು.