ಶಿವಮೊಗ್ಗ: ಸೊರಬ ತಾಲೂಕಿನ ಚಂದ್ರಗುತ್ತಿ ದೇವಸ್ಥಾನದ ಅಭಿವೃದ್ಧಿ ದೃಷ್ಟಿಯಿಂದ ಪ್ರಾಧಿಕಾರ ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ದೇವಸ್ಥಾನದ ಅಭಿವೃದ್ಧಿಗೆ ಹೊಳೆಮರೂರು ಗ್ರಾಮದ ಸ.ನಂ 187ರಲ್ಲಿ 20 ಎಕರೆ ಜಮೀನು ಹಸ್ತಾಂತರಗೊಂಡಿದೆ. ಚಂದ್ರಗುತ್ತಿ ಪ್ರಾಧಿಕಾರದ ರಚನೆಗೆ ಸಂಬಂಧಿಸಿದ ಕಡತವನ್ನು ಕಾನೂನು ಅಭಿಪ್ರಾಯ ಪಡೆಯಲು ಸಲ್ಲಿಸಲಾಗಿದೆ. ಚಂದ್ರಗುತ್ತಿ ಪಾಧಿಕಾರದಿಂದ ಮೂಲ ಸೌಲಭ್ಯ ಒದಗಿಸಲು ಭಾರತೀಯ ಸರ್ವೇ ಆಫ್ ಇಂಡಿಯಾಗೆ ನೀಡುವ 2.84 ಕೋಟಿ ರೂ. ಪಾವತಿಸಲು ಅನುಮೋದನೆ ಹಂತದಲ್ಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಕ್ರೀಡೆ ಉತ್ತೇಜಿಸಲು ವಿವಿಧ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ವಿವಿಧ ಪ್ರವಾಸಿ ತಾಣಗಳಲ್ಲಿ ಚಾರಣಕ್ಕೆ ಉತ್ತೇಜನ, ಜಿಲ್ಲಾದ್ಯಂತ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಸ್ಥಾಪನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಡಿಜಿಟಲ್ ಮಾರ್ಕೆಟಿಂಗ್ ಮತ್ತು ವೆಬ್‌ಸೈಟ್ ಅಭಿವೃದ್ಧಿಪಡಿಸಲಾಗುವುದು ಎಂದರು.
16.25 ಕೋಟಿ ರೂ. ವೆಚ್ಚದಲ್ಲಿ ನೆಹರು ಕ್ರೀಡಾಂಗಣದ ಸಮಗ್ರ ಅಭಿವೃದ್ಧಿ ಹಾಗೂ 16 ಕೋಟಿ ರೂ. ವೆಚ್ಚದಲ್ಲಿ ಹೊಸನಗರ, ಸೊರಬ, ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಕುಂಸಿ ಕ್ರೀಡಾಂಗಣಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ರಾಜ್ಯ ಭೋವಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ರವಿಕುಮಾರ್, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ ಇತರರಿದ್ದರು.