ಚಿಕ್ಕಮಗಳೂರು: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ 2021-22ನೇ ಸಾಲಿನ ಬಜೆಟ್‍ನಲ್ಲಿ 400 ಕೋಟಿ ರೂ. ಕೋರಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಾಗಿದೆ ಎಂದು ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ತಿಳಿಸಿದರು.
ಮಲೆನಾಡು ಭಾಗದಲ್ಲಿ ಸಣ್ಣ ಸಣ್ಣ ಹಳ್ಳಿಗಳ ಸಂಖ್ಯೆ ಹೆಚ್ಚಿದ್ದು, ತೂಗು ಸೇತುವೆ, ಕಾಲು ಸಂಕಗಳನ್ನು ನಿರ್ಮಿಸುವ ಅಗತ್ಯವಿದೆ. ಆ ದಿಸೆಯಲ್ಲಿ 2021-22ನೇ ಸಾಲಿನ ಬಜೆಟ್‍ನಲ್ಲಿ ಸೇರಿಸಲಾಗಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಕೃಷಿ ಕಾರ್ಯಾಗಾರ:
ಶಿವಮೊಗ್ಗದ ಕೃಷಿ, ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಪಶುವೈದ್ಯಕೀಯ ಕಾಲೇಜು ಸಹಭಾಗಿತ್ವದಲ್ಲಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯು ಕೃಷಿ ಕಾರ್ಯಾಗಾರ ನಡೆಸಲು ಚಿಂತನೆ ನಡೆಸಿದ್ದು, ಈ ಬಗ್ಗೆ ಬಜೆಟ್‍ನಲ್ಲಿ ಸೇರ್ಪಡೆ ಮಾಡಲಾಗಿದೆ. ಈ ಕಾರ್ಯಾಗಾರಗಳಲ್ಲಿ ಮಲೆನಾಡು ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಉದ್ದೇಶ ಹೊಂದಲಾಗಿದೆ. ಕೃಷಿಕರಿಗೆ ಹೆಚ್ಚು ಅರಿವು ಮೂಡಿಸುವ ಗುರಿ ಹೊಂದಲಾಗಿದೆ ಎಂದರು.
ಸಮಸ್ಯೆಗಳಿಗೂ ಆದ್ಯತೆ:
ರಸ್ತೆ ಹಾಗೂ ಚರಂಡಿ ಕಾಮಗಾರಿ ನಿರ್ವಹಿಸುವುದಷ್ಟೇ ಮಂಡಳಿ ಕೆಲಸವಾಗಬಾರದು. ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆಯೂ ಮಂಡಳಿ ಗಮನ ಹರಿಸಬೇಕು ಎನ್ನುವುದು ನನ್ನ ಆಶಯ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ಬೆಳೆಗಾರರ ಸಮಸ್ಯೆ ಇದ್ದರೆ ಶಿವಮೊಗ್ಗ, ಮಂಗಳೂರು, ಉಡುಪಿಯಲ್ಲಿ ಅಡಕೆ ಬೆಳೆಗಾರರ ಸಮಸ್ಯೆ ಇದೆ. 94ಸಿ ಅನ್ವಯ ಕಂದಾಯ ಇಲಾಖೆ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ ನಿವೇಶನ ಕಾಯಂ ಮಾಡುವ ಕಾನೂನನ್ನು ಇತ್ತೀಚೆಗೆ ತರಲಾಗಿದೆ. ಆದರೆ ಮಲೆನಾಡು ಭಾಗದಲ್ಲಿ ವಿಶೇಷವಾಗಿ ಸೊಪ್ಪಿನ ಬೆಟ್ಟದಲ್ಲಿ ಬಹಳ ವರ್ಷದಿಂದ ಮನೆ ಕಟ್ಟಿಕೊಂಡಿರುವ ನಿವೇಶನಗಳನ್ನು 94ಸಿ ವ್ಯಾಪ್ತಿಗೆ ತರುವಂತೆ ಒತ್ತಾಯವಿದೆ ಎಂದರು.
ಅರಣ್ಯವಾಸಿಗಳಿಗೆ ರಿಯಾಯಿತಿ ಅಗತ್ಯ:
ಐದು ವರ್ಷಗಳ ಕಾಲ ಅರಣ್ಯದಲ್ಲಿ ನೆಲೆಸಿರುವ ಪರಿಶಿಷ್ಟ ಪಂಗಡದವರಿಗೆ ಅರಣ್ಯ ಹಕ್ಕು ಕಾಯ್ದೆ ಅನ್ವಯ ಭೂಮಿ ಮಂಜೂರು ಮಾಡುವ ಕಾಲಕ್ಕೆ 2005ರಿಂದ ಈಚೆಗೆ ಅರಣ್ಯದಲ್ಲಿ ನೆಲೆಸಿರುವ ದಾಖಲಾತಿ ನೀಡಿದರೂ 10 ಎಕರೆವರೆಗೆ ಜಮೀನು ಮಂಜೂರು ಮಾಡಬಹುದು ಎಂದಿದೆ. ಆದರೆ ಉಳಿದ ಸಮುದಾಯಕ್ಕೆ ಮೂರು ತಲೆಮಾರುಗಳಿಂದ ನೆಲೆಸಿರುವ ಬಗ್ಗೆ ಮಾಹಿತಿ ಕೇಳಲಾಗುತ್ತಿದೆ. ಈ ಮಾಹಿತಿ ನೀಡಲು ಕಷ್ಟವಾಗುವುದರಿಂದ ಉಳಿದವರಿಗೂ ಅದೇ ರೀತಿಯಲ್ಲಿ ಷರತ್ತುಬದ್ಧ ವಿನಾಯಿತಿ ನೀಡಿ ಐದು ಎಕರೆವರೆಗೆ ಜಮೀನು ನೀಡಬೇಕೆಂಬ ಬಗ್ಗೆ ಸಂಸದರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಕೆ.ಎಸ್.ಗುರುಮೂರ್ತಿ ತಿಳಿಸಿದರು.
ಜಿಲ್ಲೆಯಲ್ಲಿ 113 ಕಾಮಗಾರಿ:
ಜಿಲ್ಲೆಗೆ ಮಂಜೂರಾದ 113 ಕಾಮಗಾರಿಗಳಲ್ಲಿ 59 ಕಾಮಗಾರಿಗಳು ಪೂರ್ಣಗೊಂಡಿದ್ದು, ಒಟ್ಟು 10.13 ಕೋಟಿ ರೂ.ನಲ್ಲಿ 592.66 ಲಕ್ಷ ರೂ. ವೆಚ್ಚವಾಗಿದೆ. ಉಳಿದ 421.28 ಲಕ್ಷ ರೂ. ವೆಚ್ಚದ ಕಾಮಗಾರಿಗಳನ್ನು ನಿರ್ವಹಿಸಬೇಕಿದ್ದು, ಅವುಗಳನ್ನು ಮಾರ್ಚ್ ಒಳಗೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಅನುದಾನ ಕೊರತೆ ತಲೆದೋರಿರುವುದರಿಂದ 2020-21ನೇ ಸಾಲಿಗೆ ಯಾವುದೆ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಾರಿ 40 ಕೋಟಿ ರೂ. ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದು, ಹಳೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದ್ದಾರೆ ಎಂದು ಗುರುಮೂರ್ತಿ ಮಾಹಿತಿ ನೀಡಿದರು.
ವಾರ್ಷಿಕ 30-40 ಕೋಟಿ ರೂ. ಅನುದಾನ:
ಎಂಎಡಿಬಿಗೆ ಸರ್ಕಾರ ವಾರ್ಷಿಕ 30 ರಿಂದ 40 ಕೋಟಿ ರೂ. ಮಾತ್ರ ಅನುದಾನ ನೀಡುತ್ತಿದೆ. ಶಾಸಕರ ಅನುದಾನ ಆಧರಿಸಿ ಕ್ರಿಯಾ ಯೋಜನೆ ತಯಾರಿಸಿ ಕಾರ್ಯನಿರ್ವಹಿಸುವುದಷ್ಟೇ ನಮ್ಮ ಕೆಲಸವಾಗಿದೆ. ಎಂಎಡಿಬಿ ಸಭೆಯಲ್ಲಿ ಶಾಸಕರು ಆಸಕ್ತಿಯಿಂದ ಪಾಲ್ಗೊಳ್ಳುವುದೂ ಅಷ್ಟೇ ಅಗತ್ಯವಿದೆ ಎಂದರು.