ಮೈಸೂರು: ಉತ್ತರ ಪ್ರದೇಶದ ಕಾನ್ಪುರ ಹಾಗೂ ತ್ರಿಪುರದ ಅಗರ್ತಲದಲ್ಲಿ ನೂತನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ (ಆಯಿಷ್) ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅಲ್ಲದೆ, ಆಯಿಷ್ ಸೇವೆ ದೇಶದ ಮೂಲೆ ಮೂಲೆಗೂ ತಲುಪಬೇಕು ಎಂಬ ಉದ್ದೇಶದಿಂದ ದೇಶದ 100 ಕಡೆಗಳಲ್ಲಿ ಆಯಿಷ್ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಆಯಿಷ್ ನಿರ್ದೇಶಕಿ ಡಾ. ಎಂ. ಪುಷ್ಪಾವತಿ ಹೇಳಿದರು.
ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯಲ್ಲಿ ಮಂಗಳವಾರ ಹಮ್ಮಿಕೊಂಡ ಸಂಸ್ಥೆಯ 57ನೇ ವಾರ್ಷಿಕೋತ್ಸವ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಯಿಷ್ ಸೇವೆ ದೇಶದ ಎಲ್ಲ ಕಡೆಗಳಲ್ಲೂ ದೊರೆಯಬೇಕು ಎಂಬ ಆಶಯದೊಂದಿಗೆ ಕಾನ್ಪುರ ಮತ್ತು ತ್ರಿಪುರದಲ್ಲಿ ನೂತನ ಸಂಸ್ಥೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿ 60 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ನಿರ್ಮಾ ಣಕ್ಕೆ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದರು.
ಎಲ್ಲ ಕಡೆಗಳಲ್ಲಿ ವಾಕ್ ಮತ್ತು ಶ್ರವಣ ದೋಷವನ್ನು ಪತ್ತೆ ಹಚ್ಚಲು ತಜ್ಞರ ಕೊರತೆ ಇದೆ. ಹಾಗಾಗಿ ಪ್ರತಿ ಜಿಲ್ಲೆಗಳಲ್ಲಿ ವಾಕ್ ಮತ್ತು ಶ್ರವಣ ದೋಷ ಪರೀಕ್ಷಿಸಿಕೊಳ್ಳಲು ಕ್ಲಿನಿಕ್‌ಗಳ ಅವಶ್ಯಕತೆ ಇದೆ. ಈಗಾಗಲೇ ಆಯಿಷ್ ವತಿಯಿಂದ ದೇಶದ 35 ಕಡೆಗಳಲ್ಲಿ ಔಟ್‌ರೀಚ್ ಸೆಂಟರ್ ಹಾಗೂ ನ್ಯೂಬೋರ್ನ್ ಹಿಯರಿಂಗ್ ಸ್ಕ್ರೀನಿಂಗ್ ಸೆಂಟರ್ (ಆಯಿಷ್ ಕೇಂದ್ರಗಳು)ಗಳನ್ನು ತೆರೆಯಲಾಗಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ ಶೇ.15 ಜನರಿಗೆ ಶ್ರವಣ ಸಮಸ್ಯೆ, ಶೇ.9 ರಂದು ವಾಕ್ ಸಮಸ್ಯೆ ಕಂಡು ಬರುತ್ತಿದೆ. ಹಾಗಾಗಿ ಈ 35 ಕೇಂದ್ರಗಳು ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶದ ವಿವಿಧೆಡೆ ಹೊಸದಾಗಿ 100 ಕಡೆಗಳಲ್ಲಿ ಕೇಂದ್ರ ತೆರೆಯಲು ಅವಕಾಶ ನೀಡಬೇಕು ಹಾಗೂ ವಿವಿಧ ರಾಜ್ಯಗಳಲ್ಲಿ ಆಯಿಷ್ ಸಂಸ್ಥೆ ಪ್ರಾರಂಭಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್, ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕಾರ್ಯಕ್ರಮ ಸಂಯೋಜಕ ಸಂತೋಷ್ ಇದ್ದರು.