ಜಿಲ್ಲೆ

ಹೊಸ ಪ್ರವಾಸಿಮಂದಿರ ನಿರ್ಮಾಣಕ್ಕೆ ಪ್ರಸ್ತಾವನೆ: ಅವಶ್ಯಕತೆ ವಿವರಿಸಿದ ಶಾಸಕ ರವಿಕುಮಾರ್ ಗಣಿಗ

ಮಂಡ್ಯ: ಜಿಲ್ಲಾ ಕೇಂದ್ರಕ್ಕೆ ನೂತನವಾಗಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಶಾಸಕ ರವಿಕುಮಾರ್ ಗಣಿಗ ಮನವಿ ಮಾಡಿದರು.

ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ, ಪ್ರವಾಸಿ ಮಂದಿರದ ಅವಶ್ಯಕತೆ ಬಗ್ಗೆ ವಿವರವಾಗಿ ಮಾತನಾಡಿದರು. ಹಾಲಿ ಇರುವ ಪ್ರವಾಸಿ ಮಂದಿರವನ್ನು 1963ರಲ್ಲಿ ನಿರ್ಮಾಣ ಮಾಡಲಾಗಿತ್ತು. ಈಗಾಗಲೇ ಕಟ್ಟಡಗಳು ಹಳೆಯದ್ದಾಗಿದೆ. ಮಂಡ್ಯ ನಗರ ಜಿಲ್ಲಾ ಕೇಂದ್ರವಾಗಿರುವುದರಿಂದ ಹಾಗೂ ಬೆಂಗಳೂರು-ಮೈಸೂರು ಮಾರ್ಗ ಮಧ್ಯೆ ಇರುವುದರಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೆಚ್ಚಾಗಿ ಬರುತ್ತಾರೆ. ವಿಐಪಿ ಕೊಠಡಿಯ ಸಮರ್ಪಕವಾಗಿ ಇಲ್ಲದಿರುವುದರಿಂದ ಸಮಸ್ಯೆಯಾಗುತ್ತಿದೆ. ಆದ್ದರಿಂದ ಹೊಸದಾಗಿ ಪ್ರವಾಸಿ ಮಂದಿರ ನಿರ್ಮಾಣ ಮಾಡಲು ಅನುದಾನ ನೀಡಬೇಕು. ಮಾತ್ರವಲ್ಲದೆ ತ್ವರಿತವಾಗಿ ನಿರ್ಮಾಣ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಹಾಲಿ ಪ್ರವಾಸಿ ಮಂದಿರದಲ್ಲಿ ಮೂರು ವಿ.ಐ.ಪಿ, ಒಂದು ವಿ.ವಿ.ಐ.ಪಿ ಹಾಗೂ ಇತರೆ 15 ಕೊಠಡಿಗಳಿವೆ. ಹಳೆಯ ಪ್ರವಾಸಿ ಮಂದಿರವನ್ನು ಸುಸ್ಥಿತಿಯಲ್ಲಿಡಲು 1 ಕೋಟಿ ರೂ ವೆಚ್ಚದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದೆ. ಆದಾಗ್ಯೂ ಕಟ್ಟಡಗಳು ಹಳೆಯದಾಗಿರುವುದರಿಂದ ಹೊಸ ಪ್ರವಾಸಿ ಮಂದಿರದ ಅವಶ್ಯಕತೆ ಇದೆ. ಈ ಕುರಿತ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ ಎಂದಿದ್ದಾರೆ.