ಶಿವಮೊಗ್ಗ: ನಮ್ಮ ರಾಜ್ಯದಲ್ಲೂ ಕೇರಳ ಮಾದರಿಯಲ್ಲಿ ಕಸ್ತೂರಿ ರಂಗನ್ ವರದಿಯ ಅಂಶಗಳನ್ನು ಸ್ವೀಕರಿಸಲಾಗುವುದು. ಈ ಸಂಬಂಧ ವರದಿಯಲ್ಲಿನ ಕೆಲವು ತಿದ್ದುಪಡಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಶಿರೂರು ಮುಂತಾದ ಕಡೆಗಳಲ್ಲಿ ಗುಡ್ಡ ಕುಸಿತ ಸಂಭವಿಸಿದ ಬಳಿಕ ಕಸ್ತೂರಿ ರಂಗನ್ ವರದಿ ಜಾರಿಗೆ ಒತ್ತಡ ಹೆಚ್ಚುತ್ತಿದೆ. ಪರಿಸರವೂ ಉಳಿಯಬೇಕು, ಜನರ ಜೀವನಕ್ಕೂ ತೊಂದರೆಯಾಗಬಾರದು ಎಂಬುದು ಸರ್ಕಾರದ ನಿಲುವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈಗಿರುವ ಕಸ್ತೂರಿ ರಂಗನ್ ವರದಿಯ ಎಲ್ಲ ಅಂಶಗಳನ್ನು ಅನುಷ್ಠಾನ ಮಾಡಿದರೆ ಮಲೆನಾಡಿನ ಜನರು ಬದುಕುವುದು ಕಷ್ಟವಾಗುತ್ತದೆ. ಹೀಗಾಗಿ ಕೇರಳದಲ್ಲಿ ಮಾಡಿದಂತೆ ಕೆಲವು ತಿದ್ದುಪಡಿ ಮಾಡಲಾಗುವುದು. ಪಕ್ಷಾತೀತವಾಗಿ ಎಲ್ಲರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಲಾಗುವುದು. ವರದಿ ಅನುಷ್ಠಾನವನ್ನು ರಾಜಕೀಯದಿಂದ ಹೊರಗಿಟ್ಟು ನೋಡಬೇಕು ಎಂದರು.