ಜಿಲ್ಲೆ

ಆಸ್ತಿ ತೆರಿಗೆ ಪಾವತಿಸದಿರಲು ನಿರ್ಧಾರ, ವೈಜ್ಞಾನಿಕ ನಿಗದಿಗೆ ಸಾರ್ವಜನಿಕರ ಆಗ್ರಹ,  ಕೆಸಿಸಿಐನಲ್ಲಿ ತೆರಿಗೆದಾರರ ಅಭಿಪ್ರಾಯ ಸಂಗ್ರಹ

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಬೇಕಾಬಿಟ್ಟಿ ಆಸ್ತಿ ತೆರಿಗೆ ಹೆಚ್ಚಿಸಿದೆ, ಇದನ್ನು ಕೂಡಲೇ ಸರಿಪಡಿಸಬೇಕು, ಅಲ್ಲಿಯವರೆಗೂ ಸಾರ್ವಜನಿಕರು ಆಸ್ತಿ ತೆರಿಗೆ ಪಾವತಿ ಮಾಡದಿರುವಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ ಹೇಳಿದರು.

ನಗರದ ಕೆಸಿಸಿಐ ಸಭಾಂಗಣದಲ್ಲಿ ಗುರುವಾರ ಆಸ್ತಿ ತೆರಿಗೆ ಹೆಚ್ಚಳ ಹಾಗೂ ಕನಿಷ್ಠ ವೇತನ ಪರಿಷ್ಕರಣೆ ಕುರಿತು ಏರ್ಪಡಿಸಿದ್ದ ತೆರಿಗೆದಾರರು, ವ್ಯಾಪಾರಸ್ಥರು, ಉದ್ಯಮಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜ್ಯದ ಎಲ್ಲಿಯೂ ಇಲ್ಲದ ತೆರಿಗೆ ಭಾರ ಅವಳಿನಗರದ ಜನರಿಗಷ್ಟೇ ಏಕೆ? ಎಂದು ಪ್ರಶ್ನಿಸಿದ ಅವರು, ಅತ್ಯಂತ ಶ್ರೀ ತೆರಿಗೆ ಕಡಿಮೆ ಮಾಡಿ ಹೊಸ ಚಲನ್ ಸೃಷ್ಟಿಸಬೇಕು. ಜನರ ಬೇಡಿಕೆಗೆ ಸ್ಪಂದಿಸದಿದ್ದರೆ ಹುಬ್ಬಳ್ಳಿ ಧಾರವಾಡ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ಹಿರಿಯರಾದ ಶಾನಭಾಗ್ ಅವರು ಮಾತನಾಡಿ, ಯಾವ ಆಧಾರದಲ್ಲಿ ಆಸ್ತಿ ತೆರಿಗೆ ಸಂಗ್ರಹ ಮಾಡುತ್ತಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಹಸ್ತಾಂತರ ಆಗದ ಲೇಔಟ್ ಗಳಲ್ಲಿನ ಪ್ಲಾಟ್ ಗೆ ಅಭಿವೃದ್ಧಿ ಕರವನ್ನು ಪ್ರತಿ ಚದರ ಅಡಿಗೆ 2200 ರೂ. ನಿಗದಿ ಮಾಡಿದ್ದಾರೆ. ಈ ಹಣದಲ್ಲಿ ಮತ್ತೊಂದು ಸೈಟ್ ಕೊಳ್ಳಬಹುದು, ಇದು ಯಾವ ಲೆಕ್ಕ, ಇದಕ್ಕೆಲ್ಲ ಯಾರು ಹೊಣೆ, ಹೊಸ ತೆರಿಗೆ ಪದ್ಧತಿ ಸರಿಯಾಗಿಲ್ಲ ಎಂದರು.

ಈ ಬಗ್ಗೆ ಪಾಲಿಕೆ ವಲಯ ಕಚೇರಿಗಳಲ್ಲಿ ಕೇಳಿದರೆ ಆಯುಕ್ತರನ್ನು ಕೇಳಿ ಎನ್ನುತ್ತಾರೆ, ಆಯುಕ್ತರು ಸರ್ಕಾರಕ್ಕೆ ಕೇಳಿ ಅಂತಾರೆ. ಇವರಿಗೆ ಸರಿಯಾಗಿ ಮಾಹಿತಿ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಶಾಂತರಾಜ ಪೋಳ ಮಾತನಾಡಿ, ತೆರಿಗೆಗಿಂತ ದಂಡದ ಪ್ರಮಾಣವೇ ಕೆಲವೆಡೆ ಹೆಚ್ಚಾಗಿದೆ. ವಾಣಿಜ್ಯ ಮಳಿಗೆಗಳಿಗೆ ಮನಸೋ ಇಚ್ಚೆ ಟ್ಯಾಕ್ಸ್ ಹಾಕಿದ್ದಾರೆ. ಮೊದಲಿದ್ದ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಹೋಗಿ ಬಿಟ್ಟಿದೆ ಎಂದು ದೂರಿದರು.
ಅಶೋಕ ನಾಗಸಮುದ್ರ ಮಾತನಾಡಿ, ಪಾಲಿಕೆ ಆಯುಕ್ತರು, ಮೇಯರ್ ಅವರನ್ನು ವಾಣಿಜ್ಯೋದ್ಯಮ ಸಂಸ್ಥೆಗೆ ಕರೆದು ಮಾತನಾಡಬೇಕು, ಮಾತುಕತೆ ಯಶಸ್ವಿಯಾಗದಿದ್ದರೆ ಮುಂದಿನ ಹೋರಾಟ ರೂಪಿಸಬೇಕು ಎಂದರು.

ಎಪಿಎಂಸಿ ವರ್ತಕ ಬಸವರಾಜ ಯಕಲಾಸಪುರ, ಹೋರಾಟ ಮಾಡದೇ ಅವಳಿನಗರದ ಜನರಿಗೆ ಯಾವುದೂ ಸಿಗುವುದಿಲ್ಲ. ಪಾಲಿಕೆಗೆ ಎಚ್ಚರಿಕೆ ಗಂಟೆಯಾಗುವಂತೆ ಹೋರಾಟ ರೂಪಿಸಬೇಕು ಎಂದು ಮನವಿ ಮಾಡಿದರು.
ಜವಳಿ ವರ್ತಕರ ಸಂಘದ ಮುಖೇಶ ಹಿಂಗರ, ನಾವು ಎಷ್ಟೇ ತೆರಿಗೆ ಕೊಟ್ಟರೂ ಕಳೆದ 25 ವರ್ಷದಿಂದ ಅವಳಿನಗರ ಅಭಿವೃದ್ಧಿ ಕಂಡಿಲ್ಲ. ಮುಂದಿನ 25 ವರ್ಷವೂ ಯಾವುದೇ ಅಭಿವೃದ್ಧಿಯ ಭರವಸೆಯೂ ಇಲ್ಲ. ಹಾಗಾದರೆ ತೆರಿಗೆ ಏಕೆ ಕೊಡಬೇಕು ಎಂದು ಪ್ರಶ್ನಿಸಿದರು.

ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ ಸುರೇಶ ಕಿರೇಸೂರ, ತೆರಿಗೆ ಪದ್ಧತಿ ಸಂಪೂರ್ಣ ಅವೈಜ್ಞಾನಿಕವಾಗಿದೆ. ಪಾಲಿಕೆ ಸದಸ್ಯರು, ಜನಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಿಲ್ಲ. ಅಧಿಕಾರಿಗಳು ಇಷ್ಟೊಂದು ದೌರ್ಜನ್ಯ ಎಸಗುತ್ತಿದ್ದರೂ ಸುಮ್ಮನೆ ಕುಳಿತಿದಿದ್ದಾರೆ. ಹಾಗಿದ್ದರೆ ಇವರನ್ನು ಜನಪ್ರತಿನಿಧಿಗಳೆಂದು ಏಕೆ ಕರೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಶೋಕ ಕುನ್ನೂರ, ಸರ್ಕಾರ ಹೇಳುವುದು ಎಲ್ಲವೂ ಸತ್ಯವಲ್ಲ. ಪರ್ಯಾಯ ಮಾರ್ಗ ಕಂಡುಕೊಂಡು ನ್ಯಾಯಾಂಗದ ಬಾಗಿಲು ಬಡಿಯಬೇಕು ಎಂದರು.
ಹೋಟೆಲ್ ಸಂಘದ ಪ್ರಕಾಶ ರಾವ್, ಪಾಲಿಕೆ ಸಭೆಯಲ್ಲಿ ಎಲ್ಲ ಪಕ್ಷಗಳ ಪ್ರತಿನಿಧಿಗಳು ಸೇರಿಯೇ ತೆರಿಗೆ ಹೆಚ್ಚಳದ ನಿರ್ಧಾರ ತೆಗೆದುಕೊಂಡು ಜನರನ್ನು ಮರಳು ಮಾಡಿದ್ದಾರೆ. ರಾಜಕೀಯ ಪಕ್ಷಗಳಿಗೆ ಜನರ ಕಾಳಜಿ ಇಲ್ಲ ಎಂದರು.

ಶಿವಬಸು ಕೋರಿ, ಮೂರು ಪಟ್ಟು ತೆರಿಗೆ ಹೆಚ್ಚಿಸಲಾಗಿದೆ. ತುಂಬದೇ ಇದ್ದರೆ ಜನರಿಗೆ ಬೆದರಿಕೆ ನೋಟಿಸ್ ನೀಡಲಾಗುತ್ತದೆ. ಇದರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕು ಎಂದರು.

ಕೆಸಿಸಿಐ ಜೊತೆ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ ವಂದಿಸಿದರು.
ಸಂದೀಪ ಬಿಡಸರಿಯಾ, ರಮೇಶ ಪಾಟೀಲ, ಅಶೋಕ ಭಂಡಾರಿ, ಇತರರು ಇದ್ದರು.