ಹರೀಶ್ ಮೋಟುಕಾನ ಮಂಗಳೂರು
ಕರಾವಳಿ ಕರ್ನಾಟಕದಲ್ಲಿ ಪ್ರಥಮವಾಗಿ ಮಂಗಳೂರಿನಲ್ಲಿ ಅನುಷ್ಠಾನಗೊಂಡಿದ್ದ ಪ್ರಾಪರ್ಟಿ ಕಾರ್ಡ್(ನಗರ ಆಸ್ತಿ ಮಾಲೀಕತ್ವದ ದಾಖಲೆ) ಯೋಜನೆಗೆ ಸರ್ಕಾರದ ಆಸಕ್ತಿ ಕೊರತೆ, ಅನುಷ್ಠಾನದಲ್ಲಿ ಗೊಂದಲದಿಂದಾಗಿ ಅವ್ಯವಸ್ಥೆಯ ಆಗರವಾಗಿ ಪರಿಣಮಿಸಿದೆ.
ಪ್ರಸ್ತುತ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯವನ್ನು ರಾಜ್ಯ ಸರ್ಕಾರ ಮುಂದಿನ ಆದೇಶದ ತನಕ ಮುಂದೂಡಿಕೆ ಮಾಡಿದೆ. ಆದರೆ ಮುಂದಕ್ಕೆ ಇದು ಕಡ್ಡಾಯವಾಗಲಿದೆಯೇ? ಅಥವಾ ಕೈ ಬಿಡಲಾಗುತ್ತದೆಯೇ? ಎನ್ನುವ ಬಗ್ಗೆ ಸರ್ಕಾರ ಇನ್ನೂ ಕೂಡ ಸ್ಪಷ್ಟ ನಿಲುವು ತಳೆದಿಲ್ಲ. ಇದರಿಂದಾಗಿ ಸಾರ್ವಜನಿಕರು ಗೊಂದಲದಲ್ಲಿದ್ದಾರೆ.
ಪ್ರಸ್ತುತ ಪ್ರಾಪರ್ಟಿ ಕಾರ್ಡ್ ಮಾಡುವ ಪ್ರಕ್ರಿಯೆ ಮುಂದುವರಿದಿದೆಯಾದರೂ, ಮೂಲ ಸೌಕರ್ಯಗಳ ಕೊರತೆಯಿಂದ ಸಮಸ್ಯೆಯಾಗಿದೆ. ಸರ್ಕಾರದ ನಿರಾಸಕ್ತಿ ಹಾಗೂ ಕಾರ್ಯ ನಿರ್ವಹಣೆಯ ಮೇಲಿನ ನಿಗಾ ಕೊರತೆಯಿಂದಾಗಿ ಇಡೀ ಪ್ರಾಪರ್ಟಿ ಕಾರ್ಡ್ ವ್ಯವಸ್ಥೆಯ ಅನುಷ್ಠಾನದಲ್ಲಿ ಅವ್ಯವಸ್ಥೆ ಉಂಟಾಗಿದೆ. ಪ್ರಾಪರ್ಟಿ ಕಾರ್ಡ್ ವ್ಯಾಪ್ತಿಗೆ 36 ಗ್ರಾಮಗಳು ಬರುತ್ತಿದ್ದು, 30 ಸೆಕ್ಟರ್‌ಗಳಿವೆ.
ಅಳತೆ ಹಾಗೂ ಪರಿಶೀಲನೆಗೆ ಸುಮಾರು 30 ಸರ್ವೇಯರ್‌ಗಳು ಅವಶ್ಯವಿದ್ದು, ಪ್ರಸ್ತುತ ಇಲ್ಲಿ 10 ಸರ್ವೇಯರ್ ಮಾತ್ರ ಇದ್ದಾರೆ. ಸುಮಾರು 40 ಕಂಪ್ಯೂಟರ್ ಅವಶ್ಯವಿದ್ದು, 20 ಕಂಪ್ಯೂಟರ್‌ಗಳು ಮಾತ್ರ ಇವೆ. ಈ ಹಿಂದೆ ಇಲ್ಲಿದ್ದ ಸಾರ್ವಜನಿಕ ಮಾಹಿತಿ ಕೇಂದ್ರ ಇದೀಗ ಮಾಯವಾಗಿದೆ. ಸಾರ್ವಜನಿಕರು ಕಾರ್ಡ್ ಬಗ್ಗೆ ಮಾಹಿತಿ ಪಡೆಯಲು ಪರದಾಡಬೇಕಿದೆ.
ಮೂಲ ಸೌಲಭ್ಯ ಕೊರತೆ: ಕಚೇರಿಗೆ ದೂರವಾಣಿ ಸಂಪರ್ಕ ಇಲ್ಲದ ಕಾರಣ ಸಾರ್ವಜನಿಕರು ಸಿಬ್ಬಂದಿಯ ವೈಯುಕ್ತಿಕ ಮೊಬೈಲ್‌ಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬೇಕಾದ ಸ್ಥಿತಿ ಇದೆ. ಸಾರ್ವಜನಿಕರಿಂದ ಸಂಗ್ರಹಿಸಿದ ದಾಖಲೆಪತ್ರಗಳ ಸಂಗ್ರಹ ವ್ಯವಸ್ಥೆ ಕೂಡಾ ಅವ್ಯವಸ್ಥೆಯಿಂದ ಕೂಡಿದೆ. ಪ್ರಸ್ತುತ ಇರುವ ದಾಖಲೆ ಸಂಗ್ರಹ ಕೊಠಡಿಯಲ್ಲಿ ದಾಖಲೆ ಪತ್ರಗಳನ್ನು ಡಂಪ್ ಮಾಡಲಾಗಿದೆ. ವ್ಯವಸ್ಥಿತವಾಗಿ ಸೆಕ್ಟರ್‌ವಾರು ಜೋಡಿಸದ ಕಾರಣ ಪ್ರಾಪರ್ಟಿ ಕಾರ್ಡ್ ತಯಾರಿ ಸಂದರ್ಭ ಈ ದಾಖಲೆ ಪತ್ರಗಳನ್ನು ಹುಡುಕುವುದೇ ದುಸ್ತರವಾಗಿದೆ. ಸಾರ್ವಜನಿಕರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಇದೆ. ಸರ್ವರ್ ಸಮಸ್ಯೆಯಿಂದಾಗಿ ಪ್ರಾಪರ್ಟಿ ಕಾರ್ಡ್ ಸಿದ್ಧಪಡಿಸುವ ಪ್ರಕ್ರಿಯೆ ವಿಳಂಬವಾಗುತ್ತಿದೆ. ಈ ನಡುವೆ ಕೆಲವು ಮಧ್ಯವರ್ತಿಗಳ ಹಾವಳಿಯಿಂದಾಗಿ ನೇರವಾಗಿ ಕಚೇರಿಯಲ್ಲಿ ಕಾರ್ಡ್ ಮಾಡಿಸುವವರು ಸಮಸ್ಯೆ ಎದುರಿಸುವಂತಾಗಿದೆ ಎನ್ನುವ ಆರೋಪವೂ ವ್ಯಕ್ತವಾಗಿದೆ.
ಸರ್ಕಾರದ ಆದೇಶದ ಪ್ರಕಾರ ಯೋಜನೆಯನ್ನು ಮುಂದೂಡಿಕೆ ಮಾಡಿರುವುದರಿಂದ ಪ್ರಾಪರ್ಟಿ ಕಾರ್ಡ್ ಪ್ರಕ್ರಿಯೆ ಕಡಿಮೆಯಾಗಿದೆ. ದಿನವೊಂದಕ್ಕೆ ಗರಿಷ್ಠ 10 ಅರ್ಜಿಗಳು ಬರುತ್ತಿವೆ. ಕಾರ್ಡ್ ಕಡ್ಡಾಯ ನಿಯಮ ಅನುಷ್ಠಾನದಲ್ಲಿದ್ದ ಅವಧಿಯಲ್ಲಿ ದಿನವೊಂದಕ್ಕೆ 250 ಪ್ರಾಪರ್ಟಿ ಕಾರ್ಡ್‌ಗಳನ್ನು ನೀಡಲಾಗುತ್ತಿದ್ದರೆ, ಇದೀಗ ಇದರ ಸಂಖ್ಯೆ 25ಕ್ಕೆ ಕುಸಿದಿದೆ. ಮಂಗಳೂರು ನಗರದಲ್ಲಿ ಒಟ್ಟು 2 ಲಕ್ಷ ಆಸ್ತಿಗಳಿದ್ದು, ಪ್ರಸ್ತುತ 67 ಸಾವಿರ ಕರಡು ಪ್ರಾಪರ್ಟಿ ಕಾರ್ಡ್‌ಗಳನ್ನು ಸಿದ್ಧಪಡಿಸಲಾಗಿದೆ. 50 ಸಾವಿರ ಕಾರ್ಡ್‌ಗಳು ಅಂತಿಮಗೊಂಡಿವೆ.
ಗೊಂದಲದ ಸ್ಥಿತಿ ಮಂಗಳೂರು ನಗರದಲ್ಲಿ ಆಸ್ತಿ ನೋಂದಣಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯವಾದ ಬಳಿಕ ಒಟ್ಟು 4 ಬಾರಿ ಜಾರಿ ಮತ್ತು ಮುಂದೂಡಿಕೆಯಾಗಿದೆ. ಸರ್ಕಾರ ಕಡ್ಡಾಯ ಮಾಡಿದ ಸಂದರ್ಭ ಪ್ರಾಪರ್ಟಿ ಕಾರ್ಡ್ ಕಚೇರಿಯಲ್ಲಿ ಭಾರಿ ಜನಸಂದಣಿ ಕಂಡು ಬಂದಿತ್ತು. ಪರಿಣಾಮ ಮೂಲಸೌಕರ್ಯ ತಲೆದೋರಿ ಪ್ರಕ್ರಿಯೆಗಳು ಅಸ್ತವ್ಯಸ್ತಗೊಂಡಿತ್ತು. ಇದೇ ಕಾರಣಕ್ಕೆ ನಗರದಲ್ಲಿ ಆಸ್ತಿ ಕಾರ್ಡ್ ಕಡ್ಡಾಯಗೊಳಿಸಿರುವುದಕ್ಕೆ ಮುಂದಿನ ಆದೇಶದ ತನಕ ವಿನಾಯಿತಿ ನೀಡಲಾಗಿದೆ ಎಂದು 2019 ಅ.11ಕ್ಕೆ ಕಂದಾಯ ಕಾಯರ್ರ್ದರ್ಶಿಯವರು ಆದೇಶ ಹೊರಡಿಸಿದ್ದರು. ಮುಂದೂಡಿಕೆ ಆದೇಶ ಹೊರ ಬಿದ್ದು ಸುಮಾರು ಒಂದೂವರೆ ವರ್ಷ ಕಳೆದಿದ್ದು, ಮುಂದಿನ ಕ್ರಮಗಳ ಬಗ್ಗೆ ಸರ್ಕಾರದ ಕಡೆಯಿಂದ ಯಾವುದೇ ಸ್ಪಷ್ಟ ನಿರ್ಧಾರ ಹೊರ ಬಿದ್ದಿಲ್ಲ.
ಸರ್ಕಾರದ ವಿವಿಧ ಕಾರ್ಯಕ್ರಮಗಳು ಚಾಲನೆಯಲ್ಲಿರುವುದರಿಂದ ಸರ್ವೇಯರ್‌ಗಳು ಅವುಗಳಿಗೆ ನಿಯೋಜನೆಗೊಂಡಿದ್ದಾರೆ. ಆದುದರಿಂದ ಸರ್ವೇಯರ್‌ಗಳ ಲಭ್ಯತೆ ಕಡಿಮೆ ಇದೆ. ಪ್ರಾಪರ್ಟಿ ಕಾರ್ಡ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೇ.50ರಷ್ಟು ಕರಡು ಕಾರ್ಡ್‌ಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಪ್ರಕ್ರಿಯೆಗೆ ವೇಗ ನೀಡಿ ಜನರಿಗೆ ವ್ಯವಸ್ಥಿತವಾಗಿ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ನಿರಂಜನ್, ಉಪನಿರ್ದೇಶಕರು, ಭೂ ಮಾಪನ ಇಲಾಖೆ