ಜಿಲ್ಲೆ

ಕಾವೇರಿ-2 ತಂತ್ರಾಂಶದಲ್ಲಿ ಆಸ್ತಿ ನೋಂದಣಿ: ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ನಗರಾಭಿವೃದ್ಧಿ ಇಲಾಖೆಯಿಂದ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲು ರಾಜ್ಯಸರ್ಕಾರ ಸಮ್ಮತಿ ನೀಡಿದೆ.

ಅದರಂತೆ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಸ್ಧಿರಾಸ್ಥಿಗಳನ್ನು ನೋಂದಾಯಿಸಲು ಇ-ಆಸ್ತಿ ತಂತ್ರಾಂಶದಿಂದ ಕಡ್ಡಾಯವಾಗಿ ಮಾಹಿತಿ ಪಡೆಯಬೇಕು. ಜತೆಗೆ ನೋಂದಾಯಿಸಲು ಇ-ಆಸ್ತಿ ತಂತ್ರಾಂಶವನ್ನು ಕಾವೇರಿ-2 ತಂತ್ರಾಂಶದೊಂದಿಗೆ ಅ.7ರಿಂದ ಜಾರಿಗೆ ಬರಲಿದೆ.

ಇ-ಆಸ್ತಿ ತಂತ್ರಾಂಶದಿಂದಾಗಿ ಸ್ವತ್ತುಗಳ ನೋಂದಣಿ ವೇಳೆ ಸಾರ್ವಜನಿಕರು ಮೋಸ ಹೋಗುವುದನ್ನು ತಡೆಯುವುದು. ಇ-ಆಸ್ತಿಯಿಂದ ಮಾತ್ರ ಸ್ವತ್ತಿನ ಸ್ವರೂಪ ಮತ್ತು ನೈಜ ಮಾಲೀಕರನ್ನು ಗುರುತಿಸಲು ಸಾಧ್ಯ. ಜತೆಗೆ ನೈಜ ಮಾಲೀಕರಿಗೆ ವಂಚಿಸಿ ಬೇರೆಯವರಿಂದ ಸ್ವತ್ತುಗಳ ನೋಂದಣಿಯನ್ನು ತಪ್ಪಿಸುವುದು. ಸ್ವತ್ತುಗಳ ಖರೀದಿದಾರರಿಗೆ ಸ್ವತ್ತಿನ ನೈಜ ಮಾಲೀಕರನ್ನು ಗುರುತಿಸುವುದು. ಭವಿಷ್ಯದಲ್ಲಿ ಉಂಟಾಗಬಹುದಾದ ವ್ಯಾಜ್ಯ, ಕಾನೂನು ತೊಂದರೆಗಳನ್ನು ತಪ್ಪಿಸುವುದು ಇ-ಆಸ್ತಿ ಸಂಯೋಜನೆ ಉದ್ದೇಶವಾಗಿದೆ.

ಕೃಷಿ ಜಮೀನಿನ ನೋಂದಣಿಗೆ ಭೂಮಿ ತಂತ್ರಾಂಶದೊಅದಿಗೆ 2006 ರಿಂದಲೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲಾಗಿದೆ. ಜಮೀನಿನ ಸರ್ವೆ ನಕ್ಷೆ-ನಮೂನೆ 11ಇ ಇರುವ ಮೋಜಣಿ ತಂತ್ರಾಂಶದೊಂದಿಗೆ ಹಾಗೂ ಕಾವೇರಿ ತಂತ್ರಾಂಶವನ್ನು 2006 ಅ.5ರಿಂದ ಸಂಯೋಜನೆ ಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯ ಕೃಷಿಯೇತರ ಸ್ವತ್ತುಗಳ ದಸ್ತಾವೇಜುಗಳ ನೋಂದಣಿಗಾಗಿ ಈ ಸ್ವತ್ತು ತಂತ್ರಾಂಶವನ್ನು 2014 ಜು.18ರಂದು ಸುತ್ತೋಲೆಯಂತೆ ಸಂಯೋಜನೆಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.