ಹೊಸಕೋಟೆ ತಾಲೂಕಿನ ಚಿಕ್ಕಹುಳ್ಳುರು ಗ್ರಾಮದಲ್ಲಿ ಆಶ್ರಯಯೋಜನೆಗೆ ಮೀಸಲಿಟ್ಟ ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳ ವೀಕ್ಷಣೆ ಮಾಡುತ್ತಿರುವ ಗ್ರಾಮಸ್ಥರಾದ ಶಫಿ, ಮಂಜುನಾಥ್, ಸುನೀಲ್. 
ಜಿಲ್ಲೆ

ಆಶ್ರಯ ಯೋಜನೆಯ ಜಮೀನು ಒತ್ತುವರಿ?

ಶಿವರಾಜ.ಎಂ

ಜಿಕ್ಕಹುಲ್ಲೂರು ಗ್ರಾಮಸ್ಥರ ಆರೋಪ

ಸರ್ಕಾರಿ ಜಾಗ ಉಳಿಸುವಂತೆ ಒತ್ತಾಯ

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹುಲ್ಲೂರು ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಮೀಸಲಿಟ್ಟ ಜಮೀನಿನ ಒತ್ತುವರಿಯಾಗಿದ್ದರೂ ಅಧಿಕಾರಿಗಳು ಜಾಣಮೌನದಿಂದಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
2013ರಲ್ಲಿ ಸಚಿವರಾಗಿದ್ದ ಬಿ.ಎನ್.ಬಚ್ಚೇಗೌಡ 4.3 ಎಕರೆ ಜಾಗವನ್ನು ಆಶ್ರಯ ಯೋಜನೆಗೆ ಸರ್ಕಾರದಿಂದ ಮಂಜೂರು ಮಾಡಿಸಿಕೊಟ್ಟಿದ್ದರು. ಈ ಸರ್ಕಾರಿ ಜಮೀನು ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅವರ ಹೆಸರಿಗೆ ಖಾತೆಯಾಗಿದೆ. ಆದರೆ ಪಕ್ಕದ ಜಮೀನಿನ ಮಾಲೀಕರೊಬ್ಬರು ಒತ್ತುವರಿ ಮಾಡಿಕೊಂಡು ರಸ್ತೆ ಹಾಗೂ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಕಂದಾಯ ಇಲಾಖೆಯಲ್ಲಿ ದೂರು ದಾಖಲಿಸಲಾಗಿದೆ, ಜತೆಗೆ ಪೊಲೀಸರಿಗೂ ದೂರು ನೀಡಲಾಗಿದೆ. ಆದರೆ ಯಾವುದೇ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಆದಷ್ಟು ಬೇಗ ಸರ್ವೇ ಮಾಡಿಸಿ ಸರ್ಕಾರಿ ಜಾಗ ಉಳಿಸಬೇಕು ಹಾಗೂ ಆಶ್ರಯ ಯೋಜನೆಯಡಿ ಬಡವರಿಗೆ ಶೀಘ್ರ ನಿವೇಶನ ಹಂಚುವ ಕೆಲಸ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರಿ ಜಮೀನು ಉಳಿಸಬೇಕು: ಸರ್ಕಾರಿ ಜಮೀನು ಒತ್ತುವರಿ ಜತೆಗೆ ಪಕ್ಕದಲ್ಲಿರುವ ರಾಜಕಾಲುವೆಯೂ ಒತ್ತುವರಿಯಾಗಿದೆ, ಇದರಿಂದ ಮಳೆ ಬಂದ ಸಂದರ್ಭದಲ್ಲಿ ರಾಜ ಕಾಲುವೆ ನೀರು ಗ್ರಾಮಕ್ಕೆ ನುಗ್ಗುತ್ತಿದ್ದು, ಅವಾಂತರ ಸೃಷ್ಟಿಯಾಗುತ್ತಿದೆ. ಈ ಬಗ್ಗೆ ಮರು ಸರ್ವೇ ಮಾಡಿಸಿ ಆಶ್ರಯ ಯೋಜನೆಗೆ ಮೀಸಲಿಟ್ಟ ಜಾಗ ಹಾಗೂ ರಾಜಕಾಲುವೆ ಜಾಗವನ್ನು ಉಳಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರಾಮೇಗೌಡ ಒತ್ತಾಯಿಸಿದ್ದಾರೆ.

ಈ ಜಾಗ ಆಶ್ರಯ ಯೋಜನೆಗೆ ಮೀಸಲಿಟ್ಟಿದ್ದು, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಸುಪರ್ದಿಗೆ ನೀಡಲಾಗಿದೆ. ಜಾಗವನ್ನು ಜೋಪಾನ ಮಾಡುವುದು ಅವರಿಗೆ ಸೇರಿದ ವಿಚಾರ. ಈ ಬಗ್ಗೆ ಅವರಿಗೆ ಸೂಚನೆ ನೀಡಲಾಗುವುದು.

ಎಂ.ವಿಜಯಕುಮಾರ್, ತಹಸೀಲ್ದಾರ್

ಈ ಜಾಗದ ಸೂಕ್ತ ಸರ್ವೇ ಮಾಡಿಸಿಕೊಡಲು ಕಂದಾಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ, ಆಶ್ರಯ ಯೋಜನೆಗೆ ಮೀಸಲಿಟ್ಟಿದ್ದ ಜಾಗದಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಿದ್ದರೆ ಅದನ್ನು ತೆರವುಗೊಳಿಸಿ ನಮ್ಮ ಸುಪರ್ದಿಗೆ ಪಡೆಯಲಾಗುವುದು.
ಸಿ.ಎನ್.ನಾರಾಯಣಸ್ವಾಮಿ, ಇಒ ತಾಪಂ