ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 1476 ಮಂದಿಗೆ ಕೋವಿಡ್ ತಗುಲಿದೆ. ಇದರಲ್ಲಿ 1213 ಮಂದಿ ಗುಣಮುಖರಾಗಿ ಮನೆ ಸೇರಿದ್ದಾರೆ, 260 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ಮೂವರಿಗೆ ಕರೊನಾ ದೃಢಪಟ್ಟಿದೆಯಾದರೂ, ಈ ಮೂವರಲ್ಲಿ ಯಾರೊಬ್ಬರೂ ಕೋವಿಡ್‌ನಿಂದಾಗಿಯೇ ಸಾವಿಗೀಡಾದವರಲ್ಲ.
ಇದು ಉಡುಪಿ ಜಿಲ್ಲೆಗೆ ಹೆಮ್ಮೆಯೂ ಹೌದು. ಹಾಗಾಗಿ ಕೋವಿಡ್ ಬಂತೆಂಬ ಕಾರಣಕ್ಕೆ ಸೋಂಕಿತರನ್ನು, ಅವರ ಮನೆಯವರನ್ನು ಅಸ್ಪಶ್ಯರಂತೆ ನೋಡುವುದು ಸಲ್ಲದು. ಆಸ್ಪತ್ರೆ ಸೇರಿದವರು ಗುಣಮುಖರಾಗಿ ಮನೆಗೆ ಸೇರುವುದು ಖಚಿತ. ಅವರನ್ನು ಮನೆಗಿಂತಲೂ ಚೆನ್ನಾಗಿ ಆಸ್ಪತ್ರೆಗಳಲ್ಲಿ ನೋಡಿಕೊಳ್ಳಲಾಗುತ್ತದೆ ಎನ್ನುತ್ತಾರೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್.
ಅಗತ್ಯ ಇದ್ದವರಿಗೆ ಚಿಕಿತ್ಸೆ: ಕೋವಿಡ್ ಆಸ್ಪತ್ರೆಗೆ ದಾಖಲಾದ ಸೋಂಕಿತರನ್ನು ಮೈಲ್ಡ್, ಮಾಡರೇಟ್ ಮತ್ತು ಸೀವಿಯರ್ ಅಂತ ವಿಂಗಡಿಸಲಾಗುತ್ತದೆ. ಸಾಧಾರಣ ಇದ್ದ ವ್ಯಕ್ತಿ ಜನರಲ್ ಕಂಡೀಶನ್ ಪರೀಕ್ಷೆ ಮಾಡಿ, ಅವರಿಗೆ ಅವಶ್ಯವಿದ್ದರೆ ಚಿಕಿತ್ಸೆ ನೀಡಲಾಗುತ್ತದೆ. ಜತೆಗೆ ನಿರಂತರ ಪಲ್ಸ್, ಆಕ್ಸಿಜನ್, ರಕ್ತದೊತ್ತಡ ಇನ್ನಿತರ ವಿಷಯಗಳ ಬಗ್ಗೆ ಮಾನಿಟರ್ ಮಾಡಲಾಗುತ್ತದೆ. ಪ್ರತಿದಿನ ಪಾಸಿಟಿವ್ ವ್ಯಕ್ತಿ ಜತೆ ಸಂಪರ್ಕದಲ್ಲಿದ್ದು, ಮಾನಸಿಕ ಖಿನ್ನತೆ ಇನ್ನಿತರ ಸಮಸ್ಯೆ ಇದ್ದರೆ ಟೆಲಿಫೋನ್ ಕೌನ್ಸೆಲಿಂಗ್ ಮಾಡಲಾಗುತ್ತದೆ. ಮಾನಸಿಕ ತಜ್ಞರು ಸೋಂಕಿತರಿಗೆ ಧೈರ್ಯ ತುಂಬುತ್ತಾರೆ.
ಜಿಲ್ಲೆಯಲ್ಲಿ ಕರೊನಾ ನಿಯಂತ್ರಣ ಮತ್ತು ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ 14 ತಂಡ ರಚಿಸಿದ್ದು, ಮಹತ್ವದ ಜವಾಬ್ದಾರಿ ಹೊಂದಿದೆ. ಬೆಡ್ ಮಾನಿಟರಿಂಗ್ ಸಿಸ್ಟಂ ಸಿದ್ಧಪಡಿಸಿದ್ದು, ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಖಾಲಿ ಇವೆ, ಸಮೀಪದ ಆಸ್ಪತ್ರೆ ಎಲ್ಲಿದೆ, ಏನು ಸೌಲಭ್ಯಗಳಿವೆ ಎಂಬ ಮಾಹಿತಿ ಕೂಡಲೇ ಲಭ್ಯವಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಹೇಳುತ್ತಾರೆ.
60 ವರ್ಷಕ್ಕಿಂತ ಮೇಲ್ಪಟ್ಟವರು, 10 ವರ್ಷ ಕೆಳಗಿನ ಮಕ್ಕಳು, ಗರ್ಭಿಣಿಯರು ಹಾಗೂ ಇತರ ಸಮಸ್ಯೆ ಇರುವವರಿಗೆ ಸಮಸ್ಯೆ ಆಗುವುದು ಜಾಸ್ತಿ ಇರುವುದರಿಂದ ಟಿ.ಎಂ.ಎ. ಪೈ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತದೆ. ಜ್ವರ, ಶೀತ, ಕೆಮ್ಮು, ಉಸಿರಾಟದ ಸಮಸ್ಯೆ ಇದ್ದವರಿಗೆ ಐಸಿಯು ಕೇರ್, ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಪ್ರತಿ ಹಂತದಲ್ಲೂ ಕೌನ್ಸೆಲಿಂಗ್ ನಡೆಯುತ್ತದೆ.
ರೋಗ ಲಕ್ಷಣವಿಲ್ಲದೆ ಕೇವಲ ಪಾಸಿಟಿವ್ ಇದ್ದವರಿಗೆ ವಿಟಮಿನ್ ಸಿ, ಜಿಂಕ್, ಪೌಷ್ಟಿಕ ಆಹಾರ, ಬಿಸಿ ನೀರು, ಇಷ್ಟೇ ಚಿಕಿತ್ಸೆ. ಕೋವಿಡ್ ಆಸ್ಪತ್ರೆಯಲ್ಲೇ ಯೋಗ ಧ್ಯಾನ ಮಾಡುವವರಿದ್ದು, ಅವರಷ್ಟಕ್ಕೆ ಅವರನ್ನು ಬಿಡಲಾಗುತ್ತದೆ.
ಒಳ್ಳೆಯ ಮನಸ್ಸಿದ್ದರೆ ಉತ್ತಮ ಆರೋಗ್ಯ ಇರುತ್ತದೆ. ಉತ್ತಮ ರೋಗನಿರೋಧಕ ಶಕ್ತಿಯ ದೇಹವಿದ್ದರೆ ಉತ್ತಮ ಆರೋಗ್ಯವಿರುತ್ತದೆ. ಖುಷಿ ಖುಷಿಯಾಗಿದ್ದರೆ ಹ್ಯಾಪಿ ಹಾರ್ಮೋನ್ ಉತ್ಪಾದನೆಯಾಗಿ ರೋಗ ತಡೆಯುವ ಶಕ್ತಿ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಕೋವಿಡ್ ಆಸ್ಪತ್ರೆ ಪ್ರಯತ್ನಿಸುತ್ತದೆ.
ಚಿಕಿತ್ಸೆ ಹಂತ: ರಕ್ತ ಪರೀಕ್ಷೆ, ಎದೆಯ ಎಕ್ಸ್‌ರೇ, ಇತರ ಕಾಯಿಲೆಗಳ ಬಗ್ಗೆ ಮಾಹಿತಿ ಪಡೆದು ಶ್ರೇಣೀಕರಣ ಮಾಡಲಾಗುತ್ತದೆ. ಕರೊನಾ ಅಲ್ಲದೆ ಬೇರೆ ಬೇರೆ ಕಾಯಿಲೆಗೆ ಪೂರಕವಾದ ಔಷಧ ಮಾತ್ರ ಕೊಡಲಾಗುತ್ತದೆ. ಅನವಶ್ಯವಾಗಿ ಯಾವುದೇ ಔಷಧ ನೀಡದೆ, ಅಪಾಯದ ಸಾಧ್ಯತೆ ಇದ್ದರೆ ಸೂಕ್ತ ಮದ್ದು ಬಳಸಲಾಗುತ್ತದೆ. ಹಲವಾರು ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ, ಕೆಲವರಿಗೆ ಆಕ್ಸಿಜನ್, ವೆಂಟಿಲೇಟರ್ ಅವಶ್ಯಕತೆ ಬಂದಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲಾಗಿದೆ. ಹಾಗಾಗಿ ಇದುವರೆಗೂ ಕರೊನಾ ಪಾಸಿಟಿವ್ ಬಂದ ಯಾರೂ ಆಸ್ಪತ್ರೆಯಲ್ಲಿ ಮೃತಪಟ್ಟಿಲ್ಲ. ಕೋವಿಡ್ ಆಸ್ಪತ್ರೆ ಸೇರಿದ್ದಾರೆ ಎನ್ನುವ ಆತಂಕ ಬಿಟ್ಹಾಕಿ, ಎಲ್ಲರೂ ಮನೆಗೆ ಬರುತ್ತಾರೆ ಎನ್ನುವ ನಂಬಿಕೆಯಿಡಿ ಎನ್ನುತ್ತಾರೆ ವೈದ್ಯರು.
ಕರೊನಾ ಬಂದಿದ್ದೇ ಕಳಂಕ ಎಂಬ ಕೀಳರಿಮೆ ಬಿಟ್ಟು, ಕರೊನಾ ವಿರುದ್ಧ ಹೋರಾಡಬೇಕೇ ಹೊರತು ವ್ಯಕ್ತಿ ವಿರುದ್ಧವಲ್ಲ. ಕೋವಿಡ್ ಆಸ್ಪತ್ರೆ ಸೇರಿದವರೆಲ್ಲ ಆರೋಗ್ಯವಾಗಿ ಮನೆಗೆ ಮರಳುತ್ತಾರೆ. ಹೆಚ್ಚೆಂದರೆ 10 ದಿನ ಆಸ್ಪತ್ರೆಯಲ್ಲಿದ್ದು ಎಲ್ಲರೂ ಹೊರಗೆ ಬರುತ್ತಾರೆ. ವೆಂಟಿಲೇಟರ್‌ವರೆಗೆ ಹೋದ ವ್ಯಕ್ತಿಗಳು ಆಸ್ಪತ್ರೆಯಿಂದ ಆರಾಮಾಗಿ ಮರಳಿದ್ದಾರೆ. ಬೆಡ್, ಆಸ್ಪತ್ರೆ ಸಿಗೋದಿಲ್ಲ, ಚಿಕಿತ್ಸೆ ಇಲ್ಲ ಎನ್ನುವ ಆತಂಕ ಬೇಡ. - ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ ಕೋವಿಡ್ ಆಸ್ಪತ್ರೆಯಲ್ಲಿ ಎಲ್ಲರೂ ನಗುನಗುತ್ತಾ ಖುಷಿಯಾಗಿರುತ್ತಾರೆ. ಕರೋನಾ ಭಯ ಬೇಡ. ಸಾಮಾನ್ಯ ಶೀತ ಜ್ವರದ ಹಾಗೆ ಬಂದು ಹೋಗುವ ಮಾಮೂಲು ಕಾಯಿಲೆಯಿದು. ಆಸ್ಪತ್ರೆಗೆ ದಾಖಲಾದ ಎಲ್ಲ ಪಾಸಿಟಿವ್ ವ್ಯಕ್ತಿಗಳು ಆರೋಗ್ಯವಾಗಿ ಮರಳಿದ್ದಾರೆ. ಆದರೆ ಎಚ್ಚರಿಕೆ ಇರಲಿ, ದೈಹಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಧರಿಸಿ. ಬೇರೆ ಆರೋಗ್ಯ ಸಮಸ್ಯೆ ಇರುವವರಿಗೆ ಪಾಸಿಟಿವ್ ಬಂದಾಗ ಶೀಘ್ರ ಚಿಕಿತ್ಸೆ ದೊರೆತರೆ ಗುಣಮುಖರಾಗುತ್ತಾರೆ. - ಸುಧೀರ್‌ಚಂದ್ರ ಸೂಡ, ಜಿಲ್ಲಾ ಆರೋಗ್ಯಾಧಿಕಾರಿ, ಉಡುಪಿ