ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಕೊಪ್ಪಳದಲ್ಲಿ ಡಿಡಿಪಿಐ ಎಂ.ಎ.ರಡ್ಡೇರ್‌ಗೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಮಂಜುಬಾಥ ಬಿ., ಖಜಾಂಚಿ ಬಸವರಾಜ ಮುಳುಗುಂದ ಇದ್ದರು. 
ಜಿಲ್ಲೆ

ಬಡ್ತಿ ವಿಷಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತಾರತಮ್ಯ

ಪ್ರವೀಣ ಉದುಸಾ ದಲಬಂಜನ್

ಕೊಪ್ಪಳ: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ವಿಷಯದಲ್ಲಿ ತಾರತಮ್ಯ ಮಾಡುತ್ತಿದ್ದು, ಸರಿಪಡಿಸಬೇಕು. ಇಲ್ಲದಿದ್ದರೆ ನಾವು ನಿಯಮದಂತೆ 1ರಿಂದ 5ನೇ ತರಗತಿಗಳಿಗೆ ಪಾಠ ಮಾಡುತ್ತೇವೆಂದು ತಿಳಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪದಾಧಿಕಾರಿಗಳು ಶುಕ್ರವಾರ ಡಿಡಿಪಿಐ ಎಂ.ಎ.ರಡ್ಡೇರ್‌ಗೆ ಮನವಿ ಸಲ್ಲಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಆಯ್ಕೆಯಾದರೂ 1ರಿಂದ 7ನೇ ತರಗತಿವರೆಗೆ ಪಾಠ ಮಾಡುತ್ತಿದ್ದೇವೆ. ಕೆಲವೆಡೆ ಉನ್ನತೀಕರಿಸಿದ ಶಾಲೆಯಲ್ಲಿ 8ನೇ ತರಗತಿಗೂ ಬೋಧನೆ ಮಾಡುತ್ತಿದ್ದೇವೆ. ಆದರೆ, ಸರ್ಕಾರ ನಾವು ಕೇವಲ ಪ್ರಾಥಮಿಕ ಶಾಲಾ ಶಿಕ್ಷಕರೆಂದು ನಿಯಮ ವಿಧಿಸಿದೆ.

ವರ್ಗಾವಣೆಯಲ್ಲಿ 8ನೇ ತರಗತಿವರೆಗಿನ ಶಾಲೆಗಳಿಗೆ ತೆರಳಲು ಅವಕಾಶ ನೀಡಿಲ್ಲ. ಇದರಿಂದ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಬಹುತೇಕ ಹುದ್ದೆಗಳು ಜಿಪಿಟಿ ಹುದ್ದೆಗಳಾಗಿ ಮಾರ್ಪಡಲಿವೆ. ಈಗ ಇದ್ದವರು ಬೇರೆಡೆ ವರ್ಗವಾದರೂ ಅಲ್ಲಿ ಜಿಪಿಟಿ ಶಿಕ್ಷಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದರಿಂದ ವರ್ಗಾವಣೆ ಪ್ರಕ್ರಿಯೆ ನಡೆಸಿದರೂ ಪ್ರಯೋಜನವಿಲ್ಲದಂತಾಗಿದೆ. ನಾವೆಲ್ಲ ವರ್ಗಾವಣೆಯಿಂದ ವಂಚಿತರಾಗಿದ್ದಾರೆಂದು ಅಳಲು ತೋಡಿಕೊಂಡರು.

ನಮಗೆ ಜಿಪಿಟಿ ಹುದ್ದೆ ನೀಡದಿದ್ದಲ್ಲಿ ನಾವು ಏಕೆ 6ರಿಂದ 8ನೇ ತರಗತಿಗಳಿಗೆ ಪಾಠ ಮಾಡಬೇಕು? ನಿಯಮದಂತೆ ನಾವು ಬೋಧಿಸುವಂತಿಲ್ಲವೆಂದು ಸರ್ಕಾರವೇ ಹೇಳಿದಂತಾಗಿದೆ. ನಾವು ಉನ್ನತ ವ್ಯಾಸಾಂಗ ಮಾಡಿ ಅರ್ಹತೆ ಗಳಿಸಿದರೂ ಹೈಸ್ಕೂಲ್‌ಗೆ ಬಡ್ತಿ ನೀಡದಿರುವುದು ಅನ್ಯಾಯ ಎಂದು ಆರೋಪಿಸಿದರು.

ಬಿಆರ್‌ಪಿ, ಸಿಆರ್‌ಪಿಗಳನ್ನು ಹೈಸ್ಕೂಲ್ ಮಟ್ಟದ ಶಾಲೆಗಳಲ್ಲಿ ಸೇವೆ ಪಡೆಯುತ್ತಿರುವುದು ನಿಲ್ಲಿಸಬೇಕು. ನಾವು ಇನ್ನು ಮುಂದೆ ನಿಯಮದಂತೆ 1ರಿಂದ 5ನೇ ತರಗತಿವರೆಗೆ ಮಾತ್ರ ಪಾಠ ಮಾಡಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು.

ಪ್ರಾಥಮಿಕ ಶಾಲಾ ಶಿಕ್ಷರ ಸಂಘದ ಜಿಲ್ಲಾಧ್ಯಕ್ಷ ಶರಣಬಸನಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಿ., ಖಜಾಂಚಿ ಬಸವರಾಜ ಮುಳುಗುಂದ, ಸಹ ಕಾರ್ಯದರ್ಶಿ ಬಸವರಾಜ ಕಮಲಾಪುರ, ಕೊಟ್ರಪ್ಪ ಗಡಗಿ, ಮಹೇಶ ಟಂಕಸಾಲೆ ಇತರರಿದ್ದರು.