ನೆಲಮಂಗಲ: ಧಾರ್ಮಿಕ ಕಾರ್ಯಗಳಿಂದ ಸ್ನೇಹ ಬಾಂಧವ್ಯಗಳ ವೃದ್ಧಿ ಸಾಧ್ಯ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಎ. ಪಿಳ್ಳಪ್ಪ ಅಭಿಪ್ರಾಯಪಟ್ಟರು.
ನಗರದ ಸಾರ್ವಜನಿಕ ಬಸ್ ನಿಲ್ದಾಣ ಬಳಿ ಗುರುವಾರ ಸಂಜೆ ಬಯಲು ವಿಘ್ನೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಕಡಲೆಕಾಯಿ ಪರಿಷೆ ಪ್ರಯುಕ್ತ ಹೂವಾಡಿಗ ಬಲಿಜ ಸಂಘದಿಂದ ಆಯೋಜಿಸಿದ್ದ ವಿಘ್ನೇಶ್ವರನ ಹೂವಿನ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ದೇವರು, ಜಾತ್ರೆ, ಉತ್ಸವಗಳಿಗೆ ವಿಶೇಷ ಸ್ಥಾನ ಇದೆ. ಧರ್ಮ, ಸಂಸ್ಕೃತಿಯ ಸಂಕೇತವಾಗಿರುವ ದೇವರ ಉತ್ಸವಗಳು ಸಮಾಜದ ಅಭಿವೃದ್ಧಿ ಸಹಕಾರಿಯಾಗುತ್ತಿವೆ. ಅದರಲ್ಲೂ ಪಟ್ಟಣಿಗರಿಗೆ ಹಬ್ಬದ ವಾತಾವರಣ ಕಟ್ಟಿಕೊಡುತ್ತಿದ್ದ ವಿಘ್ನೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಕರೊನಾ ಹಿನ್ನಲೆಯಲ್ಲಿ ಸರಳವಾಗಿ ಆಚರಣೆಗೊಳ್ಳುತ್ತಿದೆ. ಸಮುದಾಯದಿಂದ ಸಾಂಕೇತಿಕವಾಗಿ ಹೂವಿನ ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿದೆ ಎಂದರು.
ಜಾತ್ರಾಮಹೋತ್ಸವ ಬಳಿಕ ವಿವಿಧ ಬಣ್ಣದ ಹೂಗಳಿಂದ ಸಿಂಗರಿಸಿದ್ದ ವಿಘ್ನೇಶ್ವರ ಸ್ವಾಮಿಯನ್ನು ಬೆಳ್ಳಿರಥದಲ್ಲಿರಿಸಿ ನಗರದ ಮುಖ್ಯರಸ್ತೆಯಲ್ಲಿ ಉತ್ಸವ ಮಾಡಲಾಯಿತು.
ನಗರಸಭೆ ಸದಸ್ಯೆ ರಾಜಮ್ಮಪಿಳ್ಳಪ್ಪ, ಸಮುದಾಯದ ಮುಖಂಡರಾದ ಸತೀಶ್, ಲಕ್ಷ್ಮೀನಾರಾಯಣ್, ರವಿ, ದಿನೇಶ್, ಎನ್. ಮಂಜುನಾಥ್, ಸಂತೋಷ್, ರಾಘವೇಂದ್ರ, ಮಹಾಂತೇಶ್, ಬೂದಿಹಾಲ್ ಕಿಟ್ಟಿ, ರಾಮಚಂದ್ರ ಮತ್ತಿತರರು ಇದ್ದರು.