ಜಿಲ್ಲೆ

ರಾಷ್ಟ್ರದ ಆರ್ಥಿಕ ಸದೃಢತೆಗೆ ಹೈನುಗಾರಿಕೆ ಉತ್ತೇಜನ: ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಭಿಮತ

ಮೈಸೂರು: ಮಾನವನ ಜೀವನದ ಜತೆಗೆ ಹೈನುಗಾರಿಕೆಯೂ ಒಂದಕ್ಕೊಂದು ಬೆಸದುಕೊಂಡಿದೆ. ರಾಷ್ಟ್ರದ ಆರ್ಥಿಕ ಸದೃಢತೆಗೆ ಹೈನುಗಾರಿಕೆ ಉತ್ತೇಜನ ನೀಡಿದ್ದು, ಇನ್ನು ಹೆಚ್ಚಿನ ಕೊಡುಗೆ ನೀಡುವಂತಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶುವೈದ್ಯಕೀಯ ಸಂಘದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ ಪಶುವೈದ್ಯರ ರಾಜ್ಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಹಾಗೂ 6ನೇ ಸುತ್ತಿನ ಕಾಲು ಬಾಯಿ ಜ್ವರ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಶುಪಾಲನೆಯಿಂದ ದೇಶದ ಜಿಡಿಪಿ ಶೇ.5 ರಷ್ಟು ವೃದ್ಧಿಯಾಗುತ್ತಿರುವುದು ಪ್ರಶಂಸೆಯ ವಿಚಾರ. ಹೆಣ್ಣು ಕರುಗಳೇ ಜನಿಸುವಂತೆ ಗರ್ಭ ಧರಿಸುವಷ್ಟು ತಂತ್ರಜ್ಞಾನ ಮುಂದುವರೆದಿದೆ. ಸಂತಾನಾಭಿವೃದ್ಧಿಯ ಜತೆಗೆ ಹಾಲು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಹೇಳಿದರು.

ಕೃಷಿ ಕ್ಷೇತ್ರದಲ್ಲಿ ಪಶುಗಳಿಗಿಂತ ಯಂತ್ರದ ಬಳಕೆ ಹೆಚ್ಚಾಗಿದೆ. ಪ್ರಾಣಿಗಳ ಗೊಬ್ಬರವನ್ನು ಹೆಚ್ಚು ಬಳಸದೆ, ರಾಸಾಯನಿಕದ ಮೊರೆ ಹೋಗಲಾಗುತ್ತದೆ. ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದಷ್ಟು ಈ ಕ್ರಮವನ್ನು ತಡೆಗಟ್ಟುವಂತೆ ಜಾಗೃತಿ ಮೂಡಿಸಬೇಕು ಎಂದರು.

ಟಿಪ್ಪು ಸುಲ್ತಾನ್ ಕಾಲದಲ್ಲಿಯೂ ಹಳ್ಳಿಕಾರ್ ತಳಿಗಳ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ನಮ್ಮ ದೊಡ್ಡಪ್ಪ ಏನೂ ಓದಿರಲಿಲ್ಲ. ಅವರು ಕೂಡ ಊರಿನಲ್ಲಿ ಅನಾರೋಗ್ಯಕ್ಕೆ ತುತ್ತಾದ ಪಶುಗಳಿಗೆ ಔಷಧ ನೀಡುತ್ತಿದ್ದರು. ಆದರೆ ಇಂದು ವೈಜ್ಞಾನಿಕತೆ ಪರಿಣಾಮಕಾರಿಯಾಗಿ ಬೆಳೆದಿದೆ ಎಂದು ಹೇಳಿದರು.

ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಮಾತನಾಡಿ, ಮನುಷ್ಯರಿಗೆ ಕಷ್ಟ ಬಂದರೆ ಹೇಳಿಕೊಳ್ಳುತ್ತಾರೆ. ಆದರೆ ಪ್ರಾಣಿಗಳಿಗೆ ಕಾಯಿಲೆ ಬಂದರೆ ನಾವೆ ಅರ್ಥ ಮಾಡಿಕೊಂಡು ಚಿಕಿತ್ಸೆ ನೀಡಬೇಕಾಗುತ್ತದೆ ಎಂದರು.

ಖಾಸಗಿ ಪಶುವೈದ್ಯ ಕಾಲೇಜು ಪ್ರಾರಂಭಿಸಲು ಮನವಿ ಬಂದಿತ್ತು. ಆದರೆ, ಮುಖ್ಯಮಂತ್ರಿಗಳ ಸೂಚನೆಯಂತೆ ಅನುಮತಿ ನೀಡದೆ, ಸರ್ಕಾರದಿಂದ ನೂತನವಾಗಿ ಎರಡು ಕಾಲೇಜು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಇಲಾಖೆಯಲ್ಲಿರುವ ಕೊರತೆಗಳನ್ನು ಸರಿಪಡಿಸಬೇಕೆಂಬ ನಿಟ್ಟಿನಲ್ಲಿ 400 ಮಂದಿ ಪಶುವೈದ್ಯರನ್ನು ನೇಮಕಾತಿ ಮಾಡಲಾಗುತ್ತಿದೆ. ಅಲ್ಲದೆ 700 ಮಂದಿ ’ಡಿ’ ಗ್ರೂಪ್ ನೌಕರರ ನೇಮಕಕ್ಕೂ ಅನುಮತಿ ನೀಡಲಾಗಿದೆ. ಇಲಾಖೆಯಲ್ಲಿ ನ್ಯೂನ್ಯತೆ ಸರಿಪಡಿಸಿ ಕೊರತೆ ನೀಗಿಸಲು ಸರ್ಕಾರ ಬದ್ಧವಿದೆ. ಸಂಘದಿಂದ ನೀಡಿರುವ ಬೇಡಿಕೆಯನ್ನು ಈಡೇರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಕಾಲುಬಾಯಿ ಜ್ವರದ ಲಸಿಕೆಯನ್ನು ತಿಂಗಳೊಳಗೆ ಎಲ್ಲ ರಾಸುಗಳಿಗೆ ನೀಡಬೇಕು. ರೈತರು ಲಭ್ಯವಿರುವ ಮುಂಜಾನೆ ಸಮಯದಲ್ಲಿ ತೆರಳಿ ಲಸಿಕೆ ಕಾರ್ಯ ಕೈಗೊಳ್ಳಬೇಕು. ರೈತರಿಂದ ಕೆಲವು ದೂರುಗಳು ಬರುತ್ತವೆ. ತಕ್ಷಣವೇ ಸ್ಪಂದಿಸುವ ಕೆಲಸವನ್ನು ವೈದ್ಯರು ಮಾಡಬೇಕು. ರೈತರಿಗೆ ಯಾವುದೇ ಕಾರಣಕ್ಕೂ ತೊಂದರೆ ಉಂಟಾಗಬಾರದು ಎಂದು ಸೂಚಿಸಿದರು.

ಶಾಸಕ ಕೆ. ಹರೀಶ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಇಲಾಖೆ ಆಯುಕ್ತೆ ರೂಪಾ, ನಿರ್ದೇಶಕ ಮಂಜುನಾಥ್ ಪಾಳೇಗಾರ್, ಜಂಟಿ ನಿರ್ದೇಶಕ ಡಾ. ಶಿವಣ್ಣ, ಉಪನಿರ್ದೇಶಕ ಡಾ. ನಾಗರಾಜು ಇತರರು ಇದ್ದರು.