ಜಿಲ್ಲೆ

ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಂಬಡ್ತಿ ನೀಡಲಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರ ಮುಂಬಡ್ತಿ ನೀಡದೆ ಅನ್ಯಾಯ ಮಾಡುತ್ತಿದೆ. ಹೀಗಾಗಿ 20-30 ವರ್ಷ ಸೇವೆ ಸಲ್ಲಿಸಿದ ಸಾವಿರಾರು ಶಿಕ್ಷಕರು ಮುಂಬಡ್ತಿ ಪಡೆಯದೆ ನಿವೃತ್ತಿಯಾಗುವಂತಾಗಿದೆ ಎಂದು ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್​ ಗೌರವಾಧ್ಯಕ್ಷ ಗುರು ತಿಗಡಿ ದೂರಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬೇರೆ ಇಲಾಖೆಗಳಲ್ಲಿ ಅಧಿಕಾರಿಗಳಿಗೆ ಸೇವಾನುಭವದ ಅಡಿ ಮುಂಬಡ್ತಿ ನೀಡಲಾಗುತ್ತಿದೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಮಾತ್ರ ಮುಂಬಡ್ತಿ ನೀಡದಿರುವುದು ಬೇಸರದ ಸಂಗತಿ. ವಿದ್ಯಾರ್ಹತೆ ಹಾಗೂ ಸೇವಾನುಭವ ಅಡಿ ಶಿಕ್ಷಕರಿಗೆ ಮುಂಬಡ್ತಿ ನೀಡಬೇಕು. ಗ್ರಾಮೀಣ, ನಗರ ಶಿಕ್ಷಕರು ಎಂಬುದನ್ನು ನೋಡದೆ ರೋಸ್ಟರ್​ ಪ್ರಕಾರ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಖಾಲಿ ಉಳಿದ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ವಹಿಸಬೇಕು. ಶಾಲೆಗಳಿಗೆ ಆಟದ ಮೈದಾನ, ವಿದ್ಯುತ್​, ಶೌಚಗೃಹ, ಆವರಣ ಗೋಡೆ, ಡೆಸ್ಕ್​ ವ್ಯವಸ್ಥೆ ಇಲ್ಲ. ಹೀಗಾಗಿ ಸರ್ಕಾರ ಶಿಕ್ಷಕರ ಮುಂಬಡ್ತಿ ಜತೆಗೆ ಪ್ರಾಥಮಿಕ ಶಾಲೆಗಳಿಗೆ ಮೂಲ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದರು ಒತ್ತಾಯಿಸಿದರು.
ಇಚೇಗೆ ಏರ್ಪಡಿಸಿದ್ದ ಕರ್ನಾಟಕ ಶಿಕ್ಷಕರ ಸಂಘಗಳ ಪರಿಷತ್ ​ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯಾಧ್ಯಕ್ಷರಾಗಿ ಸಂಗಮೇಶ ಖನ್ನಿನಾಯ್ಕರ, ಪ್ರಧಾನ ಕಾರ್ಯದರ್ಶಿಯಾಗಿ ಆರ್​.ಎಸ್​. ಹಿರೇಗೌಡರ, ಕಾರ್ಯಾಧ್ಯಕ್ಷರಾಗಿ ರಾಮಪ್ಪ ಹಂಡಿ, ಉಪಾಧ್ಯಕ್ಷರಾಗಿ ವಿಜಯಕುಮಾರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಶಿಕ್ಷಕರಾದ ರಾಮಪ್ಪ ಹಂಡಿ, ಆರ್​.ಎಸ್​. ಹಿರೇಗೌಡರ, ಮಹಾದೇವಿ ದೊಡ್ಡಮನಿ, ಗುರು ಪೋಳ, ಗಂಗವ್ವ ಕೋಟಿಗೌಡರ, ಇತರರು ಇದ್ದರು.