ಜಿಲ್ಲೆ

ವಿದ್ಯಾರ್ಥಿ ಕುಟುಂಬಕ್ಕೆ ಸೂರಿನ ಭರವಸೆ

ನರಗುಂದ: ಪಟ್ಟಣದಲ್ಲಿ ಹೆತ್ತ ಮಗನನ್ನು ಕಳೆದುಕೊಂಡಿರುವ ಪಾಲಕರಿಗೆ ಆಶ್ರಯ ಮನೆ ಕೊಡುತ್ತೇನೆ. ಇದಕ್ಕೆ ತಗಲುವ 1 ಲಕ್ಷ ರೂಪಾಯಿ ವಂತಿಗೆಯನ್ನು ವೈಯಕ್ತಿಕವಾಗಿ ನೀಡುತ್ತೇನೆ, ಜತೆಗೆ ಸರ್ಕಾರದ ವಿವಿಧ ನೆರವು ಕಲ್ಪಿಸಿಕೊಡುತ್ತೇನೆ ಎಂದು ಶಾಸಕ ಸಿ.ಸಿ. ಪಾಟೀಲ ಅಭಯ ನೀಡಿದರು.

ಹೃದಯಾಘಾತದಿಂದ ಮೃತಪಟ್ಟಿರುವ ಪಟ್ಟಣದ ತೋಟದಕೇರಿ ಬಡಾವಣೆಯ ವಿದ್ಯಾರ್ಥಿಯ ಮನೆಗೆ ಪುರಸಭೆ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿ ಅವರು ಮಾತನಾಡಿದರು.

ಆರ್ಥಿಕ ಸಮಸ್ಯೆಯಿಂದ ಗುಣಮಟ್ಟದ ಚಿಕಿತ್ಸೆ ಕೊಡಿಸಲಾಗದೆ ಇತ್ತೀಚೆಗೆ ರಿಯಾಜ್ ಎಂಬ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿಯಾಗಿರುವ ದುರದೃಷ್ಟಕರ ಸಂಗತಿ. ಕಣ್ಣು ಕಾಣದ ಅವರ ತಂದೆ, ಅಶಕ್ತ ತಾಯಿಗೆ ತಜ್ಞ ವೈದ್ಯರಿಂದ ಗದಗನಲ್ಲಿ ಗುಣಮಟ್ಟದ ಚಿಕಿತ್ಸೆ ಕೊಡಿಸುತ್ತೇನೆ. 6ನೇ ತರಗತಿ ಶಿಕ್ಷಣ ಮೊಟಕುಗೊಳಿಸಿ ಕುಟುಂಬದ ಜವಾಬ್ದಾರಿ ಹೊತ್ತಿರುವ ಮುಮ್ತಾಜ್ ಹಾಗೂ ಆಕೆಯ ಕಿರಿಯ ಸಹೋದರ ಮಾಬುಸಾಬನನ್ನು ಕೆಲ ದಿನಗಳವರೆಗೆ ಗದಗ ಬಾಲಮಂದಿರದಲ್ಲಿಟ್ಟು ಗುಣಮಟ್ಟದ ಚಿಕಿತ್ಸೆ, ಶಿಕ್ಷಣ ಕೊಡಿಸಲಾಗುವುದು. ತಂದೆ-ತಾಯಿ, ಮಕ್ಕಳ ಆರೋಗ್ಯ ಸಂಪೂರ್ಣ ಸುಧಾರಿಸಿದ ಬಳಿಕ ನರಗುಂದ ಕೃಷ್ಣಾನಗರ ಬಡಾವಣೆಯಲ್ಲಿ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ವಿುಸಿರುವ 20/30 ಅಳತೆಯ ಸುಸಜ್ಜಿತ ಮನೆ ಒದಗಿಸಿ ಕೊಡುತ್ತೇನೆ. ಅಲ್ಲದೆ, ಪ್ರತಿ ತಿಂಗಳು ಕುಟುಂಬಕ್ಕೆ ಬೇಕಾದ ತರಕಾರಿ, ಕಿರಾಣಿ ಹಾಗೂ ಅಗತ್ಯ ದವಸ-ಧಾನ್ಯಗಳ ಪೂರೈಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಶಿಕ್ಷಣ ಮೊಟಕುಗೊಳಿಸಿರುವ ಮುಮ್ತಾಜ್​ಗೆ ಮತ್ತೆ ಶಿಕ್ಷಣ ಕೊಡಿಸಲು ಅಧಿಕಾರಿಗಳೊಂದಿಗೆ ರ್ಚಚಿಸಿದ್ದೇನೆ. ಈ ಕುರಿತು ಮಕ್ತುಂಹುಸೇನ್ ದಂಪತಿ ಹಿರಿಯರೊಂದಿಗೆ ರ್ಚಚಿಸಿ ಅಂತಿಮ ತೀರ್ವನಕ್ಕೆ ಬರಬೇಕು ಎಂದು ಶಾಸಕರು ತಿಳಿಸಿದರು.

ತಹಸೀಲ್ದಾರ್ ಶ್ರೀಶೈಲ ತಳವಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಮಲಾ ಹುಲಕೋಟಿ, ಮಕ್ಕಳ ರಕ್ಷಣಾ ಘಟಕದ ಗದಗ ಜಿಲ್ಲಾ ಸಾಮಾಜಿಕ ಕಾರ್ಯಕರ್ತ ಬಿ.ಬಿ. ಮಲ್ಲನಗೌಡ್ರ, ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ, ಕಂದಾಯ ನೀರಿಕ್ಷಕ ಎಸ್.ಎಲ್. ಪಾಟೀಲ, ಪುರಸಭೆ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಪವಾಡೆಪ್ಪ ವಡ್ಡಿಗೇರಿ, ಎಂ.ಆರ್. ಜೋರಂ, ರಿಯಾಜ್ ಕೊಣ್ಣೂರ, ಹಸನ್ ನವದಿ, ಇಬ್ರಾಹಿಂ ಚಪ್ಪರಬಂದ, ರಾಜು ಆಲಮೇಲ, ಗೌಸ್ ತಾಲೀಮನವರ, ಮಕ್ತುಂಸಾಬ್ ಸವಟಗಿ, ಹನುಮಂತ ಹವಾಲ್ದಾರ, ಹಸನಸಾಬ್ ತಹಸೀಲ್ದಾರ್, ಐ.ಪಿ. ಚಂದೂನವರ, ಸೈದುಸಾಬ್ ಬೀಚಗತ್ತಿ, ಇಬ್ರಾಹಿಂ ಸವಟಗಿ, ಇತರರಿದ್ದರು.