ಲೋಕಾಪುರ : ಸಮೀಪದ ವರ್ಚಗಲ್ ಗ್ರಾಮದ ಕೃಷ್ಣಪ್ಪ ವೆಂಕಪ್ಪ ಗುಡದನ್ನವರ ಬುಧವಾರ ಸಿಡಿಲು ಬಡಿದು ಮೃತಪಟ್ಟ ಹಿನ್ನೆಲೆಯಲ್ಲಿ ಶುಕ್ರವಾರ ಅವರ ಮನೆಗೆ ಬಿಜೆಪಿ ಮುಖಂಡ ಅರುಣ ಕಾರಜೋಳ ಭೇಟಿ ನೀಡಿ ಸಾಂತ್ವನ ಹೇಳಿದರು.
ನಂತರ ಅವರು ಮಾತನಾಡಿ, ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು. ಜಲ ಸಂಪನ್ಮೂಲ ಸಚಿವರು ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಧನ ವಿತರಿಸುತ್ತಾರೆ ಎಂದು ಮಾಹಿತಿ ನೀಡಿದರು.
ಮಳೆಯ ತೀವ್ರತೆ ಜಾಸ್ತಿ ಇರುವುದರಿಂದ ಕುರಿ ಮೇಕೆ ಮತ್ತು ದನಗಳನ್ನು ಕಾಯುವ ಯುವಕರು ಯಾವುದೇ ಕಾರಣಕ್ಕೂ ಮರಗಳು, ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಾಕ್ಸ್, ವಿದ್ಯುತ್ ಕಂಬಗಳು ಮುಂತಾದವುಗಳ ಆಶ್ರಯ ಪಡೆಯಬಾರದು. ಆದಷ್ಟು ಅಂಥ ಸ್ಥಳಗಳಿಂದ ದೂರ ಇರಬೇಕು. ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಜಿ.ಪಂ. ಮಾಜಿ ಸದಸ್ಯ ಭೀಮಶೆಪ್ಪ ಹಲಕಿ, ಪ್ರಕಾಶ ಚುಳಕಿ, ವೀರೇಶ ಪಂಚಕಟ್ಟಿಮಠ, ಭಂಟನೂರ ಗ್ರಾಪಂ ಅಧ್ಯಕ್ಷ ಪ್ರಕಾಶ ಚಿತ್ತರಗಿ, ಶಿವು ವಿರಕ್ತಮಠ, ಮಹೇಶ ಹುಗ್ಗಿ, ಸಚಿನ್ ಅರಳಿಕಟ್ಟಿ, ವಿಠ್ಠಲ ಬಾವಲತ್ತಿ ಇತರರಿದ್ದರು.