ಹುಬ್ಬಳ್ಳಿ: ನಾವು ಯಾವುದೇ ವೃತ್ತಿ ನಿರ್ವಹಿಸುವಾಗ ಸೂಕ್ಷ್ಮತೆ, ಕರ್ತವ್ಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ಮಾನವೀಯತೆಗೂ ಮಿಗಿಲಾದ ಕೆಲಸ ಮಾಡಬೇಕು. ಇಂಥ ಕರ್ತವ್ಯ ಮೈಗೂಡಿಸಿಕೊಂಡಿರುವ ಛಾಯಾಗ್ರಾಹಕರಿಗೆ ಸಾಮಾಜಿಕ ಭದ್ರತೆ ರೂಪಿಸಲಾಗುವುದು ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.
ಕರ್ನಾಟಕ ಮಾಧ್ಯಮ ಆಕಾಡಮಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಗರದ ಇಂದಿರಾ ಗಾಜಿನ ಮನೆ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಪೋಕಸ್ ಆನ್ ನ್ಯೂಜ್’ ಛಾಯಾಚಿತ್ರ ಪ್ರದರ್ಶನ ಹಾಗೂ ಪತ್ರಿಕಾ ಛಾಯಾಗ್ರಹಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಮಿಕ ಇಲಾಖೆ ಸಂಘಟಿತ ಮತ್ತು ಅಸಂಘಟಿತ ವಲಯದ ಕಾರ್ಮಿಕರಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ. ಅಸಂಘಟಿತ ವಲಯದ ಕಾರ್ಮಿಕರ ಗುಂಪಿಗೆ ಪತ್ರಿಕಾವಲಯದ ಛಾಯಾಗ್ರಾಹಕರು ಹಾಗೂ ಪತ್ರಿಕಾ ವಿತರಕರನ್ನು ಈಗಾಗಲೇ ಸೇರ್ಪಡೆ ಮಾಡಲಾಗಿದೆ. ಅವರಿಗೆ ಉಚಿತ ನೋಂದಣಿ ನೀಡಿ, ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ ಎಂದರು.
ಛಾಯಾಗ್ರಾಹಕರಿಗೆ ಸಾಮಾಜಿಕ ಭದ್ರತೆ, ಇನ್ನೂ ಹೆಚ್ಚಿನ ಸೌಲಭ್ಯ, ಆರ್ಥಿಕ ನೆರವು, ಕೌಶಲ ತರಬೇತಿ ಹಾಗೂ ಆಧುನಿಕ ಉಪಕರಣ ನೀಡುವ ಬಗ್ಗೆ ಕರ್ನಾಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರು ಪ್ರಸ್ತಾವನೆ ಸಲ್ಲಿಸಿದರೆ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಷ್ಟ ಪ್ರಶಸ್ತಿ ಪುರಸ್ಕೃತ ಪತ್ರಿಕಾ ಛಾಯಾಗ್ರಾಹಕಿ ಶಿಪ್ರಾ ದಾಸ್ ಮಾತನಾಡಿ, ಹಲವು ಸಂಘರ್ಷ, ಸವಾಲುಗಳ ಮಧ್ಯೆ ದಿಟ್ಟವಾಗಿ ಕೆಲಸ ಮಾಡುವ ಹುಮ್ಮಸ್ಸು ಛಾಯಾಗ್ರಾಹಕರಿಗೆ ಇರಬೇಕು. ಸಾಮಾಜಿಕ ಜಾಲತಾಣ, ಮೊಬೈಲ್ ಫೋನ್‌ಗಳ ಬಳಕೆ ಮಧ್ಯೆಯೂ ತಮ್ಮ ಕೌಶಲದಿಂದ ವಿಮುಖರಾಗಬಾರದು ಎಂದು ವಿಶ್ವಾಸ ತುಂಬಿದರು.
ಶಾಸಕ ಮಹೇಶ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ಫೋಟೊಗಳ ಹಲವು ಬರಹಗಳಿಗೆ ಸಮ. ಇಂಥ ಚಿತ್ರ ತೆಗೆಯುವ ಛಾಯಾಗ್ರಾಹಕರ ಬದುಕು ಶೋಚನೀಯವಾಗಿದೆ. ಛಾಯಾಗ್ರಾಹಕರು ಹಾಗೂ ಪತ್ರಕರ್ತರಿಗೆ ಸೂರು ಒದಗಿಸುವ ಕೆಲಸವನ್ನು ಸರ್ಕಾರದ ಮೂಲಕ ಸಚಿವ ಸಂತೋಷ ಲಾಡ್ ಅವರು ಮಾಡಿಸಿಕೊಡಬೇಕು ಎಂದು ಸಲಹೆಯಿತ್ತರು.
ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಶಾ ಖಾನಂ ಪ್ರಾಸ್ತಾವಿಕವಾಗಿ ಮಾತನಾಡಿ, ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಮತ್ತು ತಪ್ಪು ಅಭಿಪ್ರಾಯ ರೂಪಿಸುವ ಸುದ್ದಿ, ಸಂದೇಶಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಪ್ರತಿಯೊಬ್ಬರಿಗೂ ಅಗತ್ಯವಿರುವ ಹೆಚ್ಚಿನ ತರಬೇತಿ, ಕೌಶಲ ಹಾಗೂ ವೃತ್ತಿಪರತೆ ಬೆಳೆಸುವ ಕಾರ್ಯಕ್ರಮ ಆಯೋಜಿಸಲು ಮುಖ್ಯಮಂತ್ರಿಗಳು ಆಶಯ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಬಜೆಟದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಹೆಚ್ಚು ಅನುದಾನವನ್ನೂ ಘೋಷಿಸಿದ್ದಾರೆ ಎಂದರು.
ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ, ಶಾಸಕ ಎನ್.ಎಚ್. ಕೋನರಡ್ಡಿ, ಅಕಾಡೆಮಿ ಸದಸ್ಯ ಕೆ. ವೆಂಕಟೇಶ ಮಾತನಾಡಿದರು.
ಹುಡಾ ಅಧ್ಯಕ್ಷ ಶಾಕೀರ ಸನದಿ, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ, ಧಾರವಾಡ ಅಧ್ಯಕ್ಷ ಲೋಚನೇಶ ಹೂಗಾರ, ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ, ಕಾರ್ಯದರ್ಶಿ ಸಹನಾ ಎಂ. ಇತರರು ಇದ್ದರು. ಡಾ. ನಾಗಲಿಂಗ ಮುರಗಿ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು.
ಬಹುಮಾನ ವಿತರಣೆ: ಮಾಧ್ಯಮ ಅಕಾಡೆಮಿಯ ಪತ್ರಿಕಾ ಛಾಯಾಗ್ರಹಣ ಸ್ಪರ್ಧೆಯಲ್ಲಿ ಮಂಗಳೂರಿನ ಸತೀಶ್ ಇರಾ ಪ್ರಥಮ, ಕೊಪ್ಪಳದ ಪ್ರಕಾಶ ಕಂದಕೂರ ದ್ವಿತೀಯ ಹಾಗೂ ಭರತ್ ಕಂದಕೂರ ತೃತೀಯ ಬಹುಮಾನ ಪಡೆದರು. ವಿಜಯಪುರದ ಸುಧೀಂದ್ರ ಕುಲಕರ್ಣಿ, ಧಾರವಾಡದ ಬಿ.ಎಂ. ಕೇದಾರನಾಥ, ಕೊಪ್ಪಳದ ನಾಭಿರಾಜ ದಸ್ತೇನವರ ಅವರ ಫೋಟೋಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿವೆ. ಮೊದಲ ಮೂರು ಬಹುಮಾನಗಳು ಕ್ರಮವಾಗಿ 35,000 ರೂ., 25,000 ರೂ. ಹಾಗೂ 15,000 ರೂ. ನಗದು ಬಹುಮಾನ ನೀಡಲಾಯಿತು.