ಮಂಗಳೂರು: ದ.ಕ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಆ.6ರ ರಾತ್ರಿ 12 ಗಂಟೆ ವರೆಗೆ ಮತ್ತು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆ.1ರ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮತ್ತು ನಗರ ಪೊಲೀಸ್ ಆಯುಕ್ತ ಮತ್ತು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಅವಧಿಯಲ್ಲಿ 5ಕ್ಕಿಂತ ಹೆಚ್ಚು ಜನ ಒಟ್ಟು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಕೋಮು ಸೌಹಾರ್ದಕ್ಕೆ ದಕ್ಕೆ ಬರುವ ಕೆಲಸದಲ್ಲಿ ತೊಡಗುವುದು, ಪ್ರತಿಭಟನೆ, ವಿಜಯೋತ್ಸವ, ರಸ್ತೆ ತಡೆ ಮೊದಲಾದಲಾವುಗಳು, ಶಸ್ತ್ರ, ದೊಣ್ಣೆ, ಕತ್ತಿ ಚಾಕು ಇವುಗಳನ್ನು ಒಯ್ಯುವುದು, ಪಟಾಕಿ ಸಿಡಿಸುವುದು ಮೊದಲಾದವುಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜು.30ರ ಮುಂಜಾನೆ 6 ಗಂಟೆ ವರೆಗಿನ ನಿಷೇಧಾಜ್ಞೆ ಆದೇಶ ಹೊರಡಿಸಲಾಗಿತ್ತು. ಆದರೆ ಸಾರ್ವಜನಿಕರಲ್ಲಿ ಇನ್ನೂ ಆತಂಕದ ವಾತಾವರಣ ಹಾಗೂ ಸಣ್ಣಪುಟ್ಟ ವಿಚಾರಗಳೂ ಉದ್ವಿಗ್ನಗೊಳ್ಳುವ ಸಾಧ್ಯತೆ ಇರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಉದ್ದೇಶದಿಂದ ಮುನ್ನೆಚ್ಚರಿಕಾ ಕ್ರಮವಾಗಿ ಆ.1ರ ಬೆಳಗ್ಗೆ 6 ಗಂಟೆ ವರೆಗೆ ನಿಷೇಧಾಜ್ಞೆ ವಿಸ್ತರಿಸಲಾಗಿದೆ ಎಂದು ಎನ್.ಶಶಿಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.