ಬೇತಮಂಗಲ: ಬೇತಮಂಗಲದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧೀನದಲ್ಲಿದ್ದ
ಜಾಗದಲ್ಲಿ ನಾಡಕಚೇರಿ ನಿರ್ಮಾಣ ಮಾಡಲು ಮುಂದಾಗಿದ್ದ ಅಧಿಕಾರಿ ವರ್ಗಕ್ಕೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸುವ ಜತೆಗೆ ನಾಡಕಚೇರಿ ನಿರ್ಮಾಣಕ್ಕೆ ತಡೆಯಾಜ್ಞೆ ನೀಡಿದೆ.
ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧೀನದ ಜಾಗ ಎನ್ನಲಾದ ಪ್ರದೇಶದಲ್ಲಿ ಕಳೆದ ತಿಂಗಳು ನಾಡಕಚೇರಿ ಕಟ್ಟಲು ಡಿಸಿ ಅನುಮೋದಿಸಿದ್ದರು. ಇದಕ್ಕೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಯೊಬ್ಬರು ವಿರೋಧ ವ್ಯಕ್ತಪಡಿಸಿದ್ದರು. ಈ ವೇಳೆ ಡಿಸಿ ತೀವ್ರ ಪ್ರತಿರೋಧ ಒಡ್ಡಿ ಸ್ಥಳದಲ್ಲೇ ನಿಂತು ಹಳೇ ಕಟ್ಟಡವನ್ನು ಜೆಸಿಬಿ ಮೂಲಕ ಕೆಡವಿಸಿದ್ದರು. ಆದರೆ, ಸ್ಥಳದಲ್ಲಿದ್ದ ಹಳೇ ಕಟ್ಟಡ ಕಾಂಗ್ರೆಸ್ ಮುಖಂಡ ದಿ.ಎಂ.ಗೂಳೇಗೌಡ ಅವರ ಸಂಸ್ಥೆಯಾದ ರೂರಲ್ ಪೀಪಲ್ ಎಜುಕೇಷನ್ ಸೊಸೈಟಿಗೆ ಸೇರಿದ್ದು, ಸಂಸ್ಥೆಯಡಿ ಕೆಂಗಲ್ ಹನುಮಂತಯ್ಯ ಇಂಗ್ಲಿಷ್ ಶಾಲೆ ನಡೆಯುತ್ತಿದ್ದ ಕಟ್ಟಡವಾಗಿತ್ತು. ಇದನ್ನು ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಿವೇಶನ ಮತ್ತು ಶಾಲೆ ನಡೆಸಲು ಗೂಳೇಗೌಡರಿಗೆ ಅನುಮತಿ ನೀಡಲಾಗಿತ್ತು ಎನ್ನಲಾಗಿದೆ. ಈ ಕಟ್ಟಡವನ್ನು ಯಾವುದೇ ಮುನ್ಸೂಚನೆ ನೀಡದೆ ನೆಲಸಮ ಮಾಡಿರುವ ಬಗ್ಗೆ ಗೂಳೇಗೌಡ ಕುಟುಂಬ ಹೈಕೋರ್ಟ್ ಮೆಟ್ಟಿಲೇರಿತ್ತು.
ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿ, ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯದರ್ಶಿ ಮತ್ತು ಬೇತಮಂಗಲ ಗ್ರಾಪಂ ಪಿಡಿಒ ಮಂಜುನಾಥ್ ವಿರುದ್ಧ ಅರ್ಜಿ ಸಲ್ಲಿಸಿ, ಕಟ್ಟಡಕ್ಕೆ ಸಂಬಂಧಪಟ್ಟಂತೆ ದಾಖಲೆಗಳನ್ನು ಕುಟುಂಬ ಕೋರ್ಟ್ಗೆ ಸಲ್ಲಿಸಿದೆ.
ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಇಂಗ್ಲಿಷ್ ಮತ್ತು ಕನ್ನಡ ಶಾಲೆ ನಡೆಸಲು ಅನುಮತಿ ಹಾಗೂ ಸುಮಾರು 6 ಗುಂಟೆ ಭೂಮಿ ಸರ್ಕಾರದಿಂದ ಮಂಜೂರು ಮಾಡಿರುವುದು, ಕೆಂಗಲ್ ಹನುಮಂತಯ್ಯ ಹೆಸರಿನಲ್ಲಿ ಶಾಲೆ ನಡೆಸಿರುವುದು, ನೀರು ಸರಬರಾಜು ಮಂಡಳಿಗೆ ಪ್ರತಿ ತಿಂಗಳು ಬಾಡಿಗೆ ಕಟ್ಟಿರುವ ರಸೀದಿ, ವಿದ್ಯುತ್ ಬಿಲ್ ಸೇರಿ ಎಲ್ಲ ದಾಖಲೆಗಳನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದೆ.
ಪ್ರಕರಣದ ಬೆನ್ನಲ್ಲೇ ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗಳಿಗೆ ಉಚ್ಚ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದ ಮೇರೆಗೆ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ಹಾಜರಾಗಿ ವಾದ ಮಂಡಿಸಿದರಾದರೂ ಕಟ್ಟಡ ನೆಲಸಮ ಮತ್ತು ಅಕ್ರಮ ಪ್ರವೇಶಕ್ಕೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿ ಮತ್ತು ಸಾಾಧಾರ ಇಲ್ಲದ ಕಾರಣ ಅರ್ಜಿದಾರರ ಪರವಾಗಿ ತೀರ್ಪು ನೀಡಿದ ನ್ಯಾಯಾಲಯ, ಅಕ್ರಮ ಕಟ್ಟಡ ನಿಮಾರ್ಣಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.