ಚನ್ನಗಿರಿ: ಪಟ್ಟಣ ವ್ಯಾಪ್ತಿಯ ಶಿವಲಿಂಗೇಶ್ವರ ಕಾಲೇಜು ಮುಂಭಾಗದ ವೃತ್ತದ ಬಳಿ ಸೋಮವಾರ ರಾತ್ರಿ ದಿಢೀರ್ ಅನಾವರಣ ಮಾಡಲಾಗಿದ್ದ ವಾಲ್ಮೀಕಿ ಪ್ರತಿಮೆಯನ್ನು ಮಂಗಳವಾರ ಬೆಳಗಿನ ಜಾವ ಪೊಲೀಸರು ಹಾಗೂ ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು.
ವಾಲ್ಮೀಕಿ ಪ್ರತಿಮೆಯನ್ನು ಸೋಮವಾರ ರಾತ್ರಿ ಅನಾವಣರಗೊಳಿಸಿದ ನಾಯಕ ಸಮಾಜದ ನೂರಾರು ಜನರು, ಪ್ರತಿಮೆ ತೆರವುಗೊಳಿಸದಂತೆ ಪ್ರತಿಮೆ ಎದುರು ಕಾವಲು ಕಾಯುತ್ತಿದ್ದರು.
ಆದರೆ, ಪೊಲೀಸ್ ಬಿಗಿ ಬಂದೋಬಸ್ತ್‌ನಲ್ಲಿ ಧಾವಿಸಿದ ಪುರಸಭೆ ಸಿಬ್ಬಂದಿ ಪ್ರತಿಮೆ ತೆರವುಗೊಳಿಸಲು ಮುಂದಾದರು. ಇದರಿಂದ ಅಸಮಾಧಾನಗೊಂಡ ಸಮುದಾಯದವರು ಕೆಲಕಾಲ ಮಾತಿನ ಚಕಮಕಿ ನಡೆಸಿದರು. ನಂತರ, ಪೋಲೀಸರು ಹಾಗೂ ಪುರಸಭೆ ಸಿಬ್ಬಂದಿ ಮನವೊಲಿಕೆಗೆ ಮಣಿದು ತಾವೇ ಪ್ರತಿಮೆಯನ್ನು ತೆರವುಗೊಳಿಸಲು ಸಹಕರಿಸಿದರು.
ನಂತರ ಪ್ರತಿಮೆಯನ್ನು ವಾಹನದಲ್ಲಿ ಪುರಸಭೆಗೆ ತಂದು ಕೊಠಡಿಯಲ್ಲಿ ಇಟ್ಟು ಬೀಗ ಹಾಕಲಾಯಿತು.
ಇದು ಸೂಕ್ಷ್ಮ ವಿಚಾರವಾದ್ದರಿಂದ ಮುಂಜಾಗ್ರತೆಯಾಗಿ ತಹಸೀಲ್ದಾರ್ ಪಿ.ಎಸ್. ಯರ‌್ರಿಸ್ವಾಮಿ ಅವರು ಪಟ್ಟಣ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ ಕಲಂ 144ರಡಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.