ಜಿಲ್ಲೆ

ಕಟ್ಟೆಮಾಡು ಗ್ರಾಮದಲ್ಲಿ ಜ.೭ ರವರೆಗೆ ನಿಷೇಧಾಜ್ಞೆ ವಿಸ್ತರಣೆ

ಮಡಿಕೇರಿ: ಮಡಿಕೇರಿ ಹೋಬಳಿಯ ಎಸ್.ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಸ್ಥಾನದ ವಾರ್ಷಿಕೋತ್ಸವದ ವೇಳೆಯಲ್ಲಿ ಎರಡು ಗುಂಪುಗಳ ನಡುವೆ ನಡೆದ ಅಹಿತಕರ ಘಟನೆಯ ವಿಚಾರವಾಗಿ ಸ್ಥಳದಲ್ಲಿ ಪ್ರಸ್ತುತ ಉಂಟಾಗಿರುವ ಬೆಳವಣಿಗೆಗಳ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜ.೨ ರ ಬೆಳಿಗ್ಗೆ ೬ ಗಂಟೆಯಿಂದ ಜ.೭ ರ ಬೆಳಗ್ಗೆ ೬ ಗಂಟೆಯವರೆಗೆ ಜಿಲ್ಲಾಡಳಿತ ನಿಷೇಧಾಜ್ಞೆಯನ್ನು ವಿಸ್ತರಿಸಿದೆ.

ಈ ಹಿಂದೆ ಜನವರಿ ೨ ರವರೆಗೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಆರಕ್ಷಕ ಅಧೀಕ್ಷಕರ ಕೋರಿಕೆಯನ್ನು ಪರಿಗಣಿಸಿ ಕಾನೂನು ಸುವ್ಯವಸ್ಥೆ ಮತ್ತು ಆಂತರಿಕಾ ಭದ್ರತೆ ದೃಷ್ಟಿಯಿಂದ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ ೨೦೨೩ರ ಕಲಂ ೧೬೩ ರಡಿ ದತ್ತವಾದ ಅಧಿಕಾರದಂತೆ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿ, ಎಸ್.ಕಟ್ಟೆಮಾಡು ಗ್ರಾಮದ ಶ್ರೀ ಮಹಾಮೃತ್ಯುಂಜಯ ದೇವಸ್ಥಾನದ ಸುತ್ತಮುತ್ತಲಿನ ೫ ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಈ ಸಂದರ್ಭ ೫ಕ್ಕಿಂತ ಹೆಚ್ಚು ಜನ ಗುಂಪು ಸೇರದಂತೆ ಪ್ರತಿಭಟನೆ, ಮೆರವಣಿಗೆ, ರ‌್ಯಾಲಿ, ಜಾಥಾ ಪ್ರಚೋದನಾತ್ಮಕ ಘೋಷಣೆ ಕೂಗದಂತೆ ನಿರ್ಬಂಧಿತ ಪ್ರದೇಶ ಎಂದು ಘೋಷಿಸಿ ಆದೇಶಿಸಿದ್ದಾರೆ.