ಉಡುಪಿ: ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ವಿವಿಧ ಯೋಜನೆಯಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಪ್ರತಿಶತ ನೂರರಷ್ಟು ಕಾಮಗಾರಿ ಅನುಷ್ಠಾನಗೊಳಿಸಬೇಕು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಸೂಚನೆ ನೀಡಿದರು.
ಶನಿವಾರ ಮಣಿಪಾಲ ರಜತಾದ್ರಿಯ ಜಿಪಂ ಸಭಾಂಗಣದಲ್ಲಿ ಜಿಲ್ಲಾ ವ್ಯಾಪ್ತಿಯ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರಾವಳಿ ಭಾಗದಲ್ಲಿರುವ ಸ್ಥಳೀಯ ಸಂಸ್ಥೆಗಳು ಇತರೆ ಜಿಲ್ಲೆಗಳಿಗೆ ಹೋಲಿಸಿದ್ದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಯಥಾವತ್ತಾಗಿ ಸರಕಾರದ ಮಾರ್ಗಸೂಚಿಯನ್ವಯ ವಿಳಂಬವಿಲ್ಲದೇ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆಮಾಡಿಕೊಳ್ಳುವುದರೊಂದಿಗೆ ಇನ್ನಷ್ಟು ಉತ್ತಮ ರೀತಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.
ಆಸ್ತಿ ತೆರಿಗೆ ವಸೂಲಾತಿಯಲ್ಲಿ ಬೈಂದೂರು ಹಾಗೂ ಕುಂದಾಪುರ ಸ್ಥಳೀಯ ಸಂಸ್ಥೆಗಳು ಜಿಲ್ಲೆಯ ಇತರೆ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದರೆ ವಸೂಲಾತಿ ಕಡಿಮೆ ಇದೆ. ಇದನ್ನು ಆದ್ಯತೆ ಮೇರೆಗೆ ವಸೂಲಿ ಮುಂದಾಗಬೇಕು. ಮನೆಗಳನ್ನು ನಿರ್ಮಾಣ ಮಾಡಿದ ಸಂದರ್ಭದಲ್ಲಿ ಮಾಲೀಕರು ಕಟ್ಟಡಕ್ಕೆ ತೆರಿಗೆಯನ್ನು ಮೊದಲೇ ಎರಡು-ಮೂರು ವರ್ಷಗಳ ಕಾಲ ಕಟ್ಟಿರುತ್ತಾರೆ. ನಂತರದಲ್ಲಿ ಅವುಗಳನ್ನು ವಿಸ್ತರಣೆ ಮಾಡಿ, ಮೊದಲನೆ, ಎರಡನೇ ಮಹಡಿ ವಿಸ್ತೀರ್ಣ ಹೆಚ್ಚಿಸಿದರೂ ಸಹ ಹಳೆಯ ಕಟ್ಟಡದ ತೆರಿಗೆಯನ್ನೇ ಪಾವತಿ ಮಾಡುತ್ತಿರುತ್ತಾರೆ. ಇದರಿಂದಾಗಿ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ವಂಚನೆ ಉಂಟಾಗುತ್ತದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಪರಿಶೀಲನೆ ಮಾಡಿ, ಕಟ್ಟಡದ ವಿಸ್ತೀರ್ಣಕ್ಕೆ ಅನುಗುಣವಾಗಿ ತೆರಿಗೆಯನ್ನು ವಸೂಲಿ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಡೆಂಗ್ಯೂ ರೋಗವು ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಸ್ಥಳೀಯ ಸಂಸ್ಥೆಗಳು ತೆಗೆದುಕೊಳ್ಳಬೇಕು. ಸಾರ್ವಜನಿಕರು ಅರೋಗ್ಯ ಶಿಕ್ಷಣದ ಬಗ್ಗೆ ಮಾಹಿತಿ ನೀಡಿ ಮಳೆಯ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳು ಉತ್ಪಾದನೆ ಆಗದಂತೆ ಕ್ರಮ ವಹಿಸಬೇಕು. ಪ್ರತಿ ಶುಕ್ರವಾರ ಡ್ರೈ ಡೇ ಆಚರಣೆಗೆ ಹೆಚ್ಚು ಒತ್ತು ನೀಡಬೇಕು ಎಂದರು.
ತ್ಯಾಜ್ಯ ವಿಲೇವಾರಿ ಘಟಕಗಳನ್ನು ಪ್ರಾರಂಭಿಸಲು ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಅನುದಾನ ನೀಡಿದೆ. ಇದಕ್ಕೆ ಅಗತ್ಯವಿರುವ ಭೂಮಿಯನ್ನು ಗುರುತಿಸಿ, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆಯನ್ನು ಕರೆದು ವಿಲೇವಾರು ಘಟಕದ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ಮುಂದಿನ ದಿನಗಳಲ್ಲಿ ಅಲ್ಲಿ ವೈಜ್ಞಾನಿಕ ರೀತಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಲು ಮುಂದಾಗಬೇಕು. ಕಾಪು ಮತ್ತು ಕಾರ್ಕಳ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅಮೃತ್ ಯೋಜನೆಯಡಿ ಕುಡಿಯುವ ನೀರು ಸೌಲಭ್ಯ ಕಲ್ಪಿಸುವ ಕಾಮಗಾರಿ ಚಾಲ್ತಿಯಲ್ಲಿದ್ದು, ಶೇ.50 ರಷ್ಟು ಕಾಮಗಾರಿಗಳು ಆಗಿವೆ ಎಂದರು.
ಸ್ಥಳೀಯ ಮಹಿಳಾ ಸಂಘಗಳ ಮೂಲಕ ಸ್ಥಳೀಯ ಸಂಸ್ಥೆಗಳ ಕಟ್ಟಡಗಳು ಮತ್ತು ಜಾಗದ ತೆರಿಗೆಯ ವಸೂಲಾತಿ ಮಾಡಬೇಕು. ಉದ್ದಿಮೆದಾರರಿಗೆ ಸ್ಥಳೀಯ ಸಂಸ್ಥೆಗಳು 5 ವರ್ಷಕ್ಕೊಮ್ಮೆ ಪರವಾನಿಗೆ ನೀಡಲು ಸಕಾರ ಆದೇಶ ನೀಡಿದೆ. ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಚ್ಛತೆಗೆ ಮೊದಲೇ ಆದ್ಯತೆ ನೀಡಬೇಕು. ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ನಿಗಧಿಪಡಿಸಿರುವ ಗುಣಮಟ್ಟದಲ್ಲಿ ವಿತರಿಸಬೇಕು. ಪ್ರತಿಯೊಂದು ಕ್ಯಾಂಟೀನ್‌ಗಳಿಗೂ ಸಿ.ಸಿ.ಟಿ.ವಿ ಅಳವಡಿಕೆ ಮಾಡಲು ಈಗಾಗಲೇ ಆದೇಶ ಮಾಡಲಾಗಿದೆ. ಇದರಿಂದ ನಿಖರವಾಗಿ ಎಷ್ಟು ಜನರಿಗೆ ಆಹಾರ ವಿತರಣೆ ಆಗಿದೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ಸಾಧ್ಯ. ಇದಕ್ಕೆ ಒತ್ತು ನೀಡಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಪ್ರಭುಲಿಂಗ ಕವಲಿಕಟ್ಟಿ, ಆಪ್ತ ಕಾರ್ಯದರ್ಶಿ ಡಾ.ಕೆ ಮುರುಳಿಧರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.