ಯಾದಗಿರಿ: ಜಿಲ್ಲೆಯಲ್ಲಿ ಸ್ಥಾಪನೆ ಮಾಡಿರುವ ಕ್ವಾರಂಟೈನ್ ಕ್ಯಾಂಪ್ಗಳಲ್ಲಿ ಕಡ್ಡಾಯವಾಗಿ ಮೂಲಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಜಿಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಕ್ವಾರಂಟೈನ್ ಕೇಂದ್ರಗಳ ಸೌಲಭ್ಯ ಹಾಗೂ ಹೆಲ್ತ್ವಾಚ್ ಆ್ಯಪ್ ಮೂಲಕ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಹೊರ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರನ್ನು ವಸತಿಶಾಲೆ ಮತ್ತು ಹಾಸ್ಟೆಲ್ಗಳಲ್ಲಿ ಪ್ರತ್ಯೇಕವಾಗಿರಿಸಲಾಗಿದೆ. ಹೆಚ್ಚಿನ ವಲಸಿಗರು ಜಿಲ್ಲೆಗೆ ವಾಪಸ್ಸಾಗುತ್ತಿರುವುದರಿಂದ ಸರ್ಕಾ ರಿ ಮತ್ತು ಖಾಸಗಿ ಶಾಲೆಗಳನ್ನು ಕೂಡ ಕ್ವಾರಂಟೈನ್ ಕೇಂದ್ರಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಇವುಗಳಲ್ಲಿ ಕ್ವಾರಂಟೈನ್ ಮಾಡುವ ಎಲ್ಲ ವಲಸಿಗರಿಗೆ ಅಚ್ಚುಕಟ್ಟಾಗಿ ಮೂಲ ಸೌಲಭ್ಯಗಳ ವ್ಯವಸ್ಥೆ ಮಾಡಬೇಕು ಎಂದರು.
ಹಾಸ್ಟೆಲ್ಗಳಿಗೆ ವಾರ್ಡನ್, ಕಾಲೇಜುಗಳಿಗೆ ಪ್ರಾಂಶುಪಾಲರು ಹಾಗೂ ಶಾಲೆಗಳಿಗೆ ಸಂಬಂಧಟ್ಟ ಮುಖ್ಯಶಿಕ್ಷಕರು ಮತ್ತು ಪಿಡಿಒ ಅವರನ್ನು ನೋಡಲ್ ಅಧಿಕಾರಿಗಳೆಂದು ನೇಮಿಸಲಾಗಿದೆ. ಇವರು ವಲಸಿಗರ ವಿವರಗಳನ್ನು ನಿಗದಿತ ನಮೂನೆಯಲ್ಲಿ ಮಾಹಿತಿ ಸಿದ್ಧಪಡಿಸಿ, ಪ್ರತಿದಿನ ಸಂಜೆ 5ರ ಒಳಗಾಗಿ ಜಿಲ್ಲಾಧಿಕಾರಿಗಳ ಕಾಯರ್ಾಲಯಕ್ಕೆ ಇ-ಮೇಲ್ ಮಾಡಬೇಕು. ಮಾಹಿತಿ ಬಗ್ಗೆ ಮತ್ತು ಕ್ವಾರಂಟೈನ್ ಕೇಂದ್ರಗಳ ಸೌಲಭ್ಯಗಳ ವ್ಯವಸ್ಥೆಯ ಮೇಲ್ವಿಚಾರಣೆಯನ್ನು ಆಯಾ ತಾಲೂಕಿನ ಬಿಇಒ, ಬಿಆರ್ಪಿ, ಸಿಆರ್ಪಿಗಳು ಮಾಡಬೇಕು ಎಂದು ಸೂಚಿಸಿದರು.
ವಲಸಿಗರ ಹೆಸರು ಮತ್ತು ವಿಳಾಸ, ವಯಸ್ಸು, ಲಿಂಗ, ಯಾವ ರಾಜ್ಯದಿಂದ ಬಂದಿದ್ದಾರೆ, ಪ್ರಯಾಣ ಬೆಳೆಸಿದ ದಿನಾಂಕ, ಪ್ರಯಾಣ ಬೆಳೆಸುತ್ತಿರುವ ಊರು, ಕೇಂದ್ರಕ್ಕೆ ದಾಖಲಾದ ದಿನಾಂಕ, ಕಫದ ಮಾದರಿ ಸಂಗ್ರಹಿಸಿದ ದಿನಾಂಕ, ಮಾದರಿಯ ವರದಿ, ರಕ್ತದೊತ್ತಡ ಅಥವಾ ಸಕ್ಕರೆ ಹಾಗೂ ಇತರೆ ಕಾಯಿಲೆಗಳ ವಿವರ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರ ವಿವರ, ಮೊಬೈಲ್ ಸಂಖ್ಯೆ, ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆ ಮಾಡಲಾದ ದಿನಾಂಕ ಸೇರಿ ಇತರೆ ಮಾಹಿತಿ ಭರ್ತಿ ಮಾಡಬೇಕು ಎಂದು ಅವರು ತಿಳಿಸಿದರು.
ಇನ್ನು ಕ್ವಾರಂಟೈನ್ ಕೇಂದ್ರಕ್ಕೆ ಭೇಟಿ ನೀಡುವ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳ ವಿವರಗಳನ್ನು ಕೂಡ ದಾಖಲಿಸಬೇಕು. ಅವರ ಹೆಸರು ಮತ್ತು ಪದನಾಮ, ಮೊಬೈಲ್ ಸಂಖ್ಯೆ, ಭೇಟಿ ನೀಡಿದ ದಿನಾಂಕ, ಅವರು ನೀಡಿದ ನಿರ್ದೇಶನ ಅಥವಾ ಸಲಹೆಗಳು, ತೆಗೆದುಕೊಂಡ ಕ್ರಮವನ್ನು ದಾಖಲಿಸಬೇಕು. ಅಲ್ಲದೇ, ಕ್ವಾರಂಟೈನ್ ಕೇಂದ್ರಗಳಿಗೆ ವಿವಿಧ ಸಂಘ-ಸಂಸ್ಥೆಗಳಿಂದ ದಾನ ಮಾಡಿದವರ ಹೆಸರು ಮತ್ತು ವಿಳಾಸ, ಮೊಬೈಲ್ ಸಂಖ್ಯೆ, ನೀಡಿರುವ ಸಾಮಗ್ರಿಗಳ ವಿವರವನ್ನು ದಾಖಲಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಗೆ ಹೊಸದಾಗಿ ಬರುವ ವಲಸೆಗಾರರನ್ನು ಈಗಾಗಲೇ ಕ್ವಾರಂಟೈನ್ ಮಾಡಿದವರ ಜತೆಗೆ ಸೇರಿಸುವಂತಿಲ್ಲ. ಕೇಂದ್ರಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಜಿಲ್ಲೆಯ ಯಾವುದೇ ಸಾರ್ವಜನಿಕ ಕಟ್ಟಡಗಳನ್ನು ವಿಪತ್ತು ನಿರ್ವಹಣಾ ಕಾಯ್ದೆಯಡಿ ವಶಪಡಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಯಾರಾದರೂ ಇದಕ್ಕೆ ಅಡ್ಡಿಪಡಿಸಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮತಗಟ್ಟೆ ಮಟ್ಟದ ಅಧಿಕಾರಿಗಳು ಮತ್ತು ಶಿಕ್ಷಕರಿಂದ ಹೆಲ್ತ್ವಾಚ್ ಆ್ಯಪ್ ಮೂಲಕ ಕೋವಿಡ್- 19 ಸಂಬಂಧ ಜಿಲ್ಲೆಯಲ್ಲಿ ನಡೆಸುತ್ತಿರುವ ಎಲ್ಲ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆಯ ಪ್ರಗತಿ ಉತ್ತಮವಾಗಿದೆ. ಬಾಕಿ ಸಮೀಕ್ಷೆ ಕೂಡ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.
ಜಿಪಂ ಸಿಇಒ ಶಿಲ್ಪಾ ಶರ್ಮಾ ಮಾತನಾಡಿ, ಡಿಡಿಪಿಐ ಸೇರಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್ಪಿ, ಸಿಆರ್ಪಿಗಳು ಕ್ವಾರಂಟೈನ್ ಕೇಂದ್ರಗಳಲ್ಲಿ ಯಾವುದೇ ಸಮಸ್ಯೆಗಳು ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಾಣೆ, ಹೊರ ರಾಜ್ಯಗಳಿಂದ ಬಂದು ಕ್ವಾರಂಟೈನ್ಗೆ ಒಳಗಾದ ಪ್ರತಿಯೊಬ್ಬರು 14 ದಿನಗಳ ವರೆಗೆ ಕಡ್ಡಾಯವಾಗಿ ಕೇಂದ್ರದಲ್ಲಿರಬೇಕು. ಒಂದು ವೇಳೆ ಇದಕ್ಕೆ ನಿರಾಕರಿಸಿ, ಹೊರಗಡೆ ಓಡಾಡುವುದಾಗಲಿ ಅಥವಾ ಅಲ್ಲಿನ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡುವುದಾಗಲಿ ಕಂಡುಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಹಾಯಕ ಆಯುಕ್ತ ಶಂಕರಗೌಡ ಎಸ್.ಸೋಮನಾಳ, ಡಿಡಿಪಿಐ ಶ್ರೀನಿವಾಸ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪ ನಿದರ್ೇಶಕ ಎಸ್.ಎಸ್.ಚನ್ನಬಸವ ಸಭೆಯಲ್ಲಿದ್ದರು.