ಜಿಲ್ಲೆ

ಕೆಆರ್‌ಎಸ್ ಭರ್ತಿ ಕೆರೆಗಳು ಖಾಲಿ: ಉಸ್ತುವಾರಿ ಕಾರ್ಯದರ್ಶಿ ಮನೋಜ್‌ಕುಮಾರ ಮೀನಾ ಅಸಮಾಧಾನ

ಕೆ.ಎನ್.ರಾಘವೇಂದ್ರ

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆ ಭರ್ತಿಯಾಗಿದ್ದರೂ ಜಿಲ್ಲೆಯಲ್ಲಿ ಹಲವು ಕೆರೆ ಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಈ ಬಗ್ಗೆ ಹಲವು ಪ್ರತಿಭಟನೆ ನಡೆದರೂ ಸಂಬಂಧಿಸಿದ ಅಧಿಕಾರಿಗಳು ಸಬೂಬು ಹೇಳುತ್ತಾ ಕಾಲ ದೂಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಗಂಭೀರ ಚರ್ಚೆ ನಡೆದಿದೆ.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಕುಮಾರ ಮೀನಾ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷೃತೆ ಅನಾವರಣಗೊಂಡಿದೆ. ಕೆರೆ ಕಟ್ಟೆ ನೀರು ತುಂಬಿಸುವ ವಿಚಾರದಲ್ಲಿ ನಿರ್ಲಕ್ಷೃತನ ತೋರಿದ ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.

ಈ ಕುರಿತು ಮಾತನಾಡಿದ ಮನೋಜ್ ಕುಮಾರ ಮೀನಾ, ಕೆಆರ್‌ಎಸ್ ಜಲಾಶಯ ತುಂಬಿದೆ. ಅಂತೆಯೇ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಪ್ರಗತಿಯಲ್ಲಿದೆ. ಆದಾಗ್ಯೂ ಕೆಲವು ಕೆರೆಗಳು ತುಂಬಿರುವುದಿಲ್ಲ. ಒಂದು ವೇಳೆ ಕೆರೆಗಳಿಗೆ ಒಳಹರಿವಿಗೆ ತೊಂದರೆಯಿದ್ದಲ್ಲಿ ಪರಿಶೀಲಿಸಿ ಪರಿಹರಿಸಿ. ಶೇ.100ರಷ್ಟು ಕೆರೆಗಳನ್ನು ತುಂಬಿಸಿದರೆ ಬಹಳಷ್ಟು ಸಮಸ್ಯೆಗಳು ಪರಿಹಾರವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳ ಗಮನಹರಿಸಬೇಕು. ಮುಖ್ಯವಾಗಿ ಕೆರೆಗಳ ಒತ್ತುವರಿ, ಹೂಳು ತೆಗೆಯುವುದು, ಒಳಹರಿವಿನ ತೊಂದರೆಗಳನ್ನು ಪರಿಹರಿಸಲು ಯೋಜನೆ ರೂಪಿಸಿಕೊಳ್ಳಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಪಿಂಚಣಿ ನಿಲ್ಲಿಸಲು ಕ್ರಮ ವಹಿಸಿ: ಸಾಮಾಜಿಕ ಪಿಂಚಣಿ ಯೋಜನೆಯಲ್ಲಿ ಫಲಾನುಭವಿಗಳಿಗೆ ಹಣ ಪಾವತಿ ಮಾಡುವ ಸಂದರ್ಭದಲ್ಲಿ ಈಗಾಗಲೇ ಮರಣ ಹೊಂದಿರುವವರ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಅಂತೆಯೇ ಮರಣ ಪ್ರಮಾಣ ಪತ್ರ ಪಡೆದು ಈ ಜನ್ಮ ಸಾಫ್ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಿಸಿ ಪಿಂಚಣಿ ಪಾವತಿ ಮಾಡುವುದನ್ನು ನಿಲ್ಲಿಸಲು ಕ್ರಮ ವಹಿಸಬೇಕು. ಅದೇ ರೀತಿ ಅನ್ನ ಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಈ ನಿಟ್ಟಿನಲ್ಲಿ ಅನರ್ಹರನ್ನು ಕೈಬಿಡಬೇಕು ಎಂಬ ಉದ್ದೇಶದಿಂದ ಸರ್ಕಾರದಿಂದ ಸಲಹೆ ಹಾಗೂ ಸೂಚನೆಗಳನ್ನು ನೀಡಲಾಗಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಎಂದು ನಿರ್ದೇಶನ ನೀಡಿದರು.

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 7,136 ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲು ಯುವನಿಧಿ ಪ್ಲಸ್ ಯೋಜನೆ ಜಾರಿಗೆ ತರಲಾಗಿದೆ. ಅದರಂತೆ 7,136 ಅಭ್ಯರ್ಥಿಗಳನ್ನು ಅವರ ವಿದ್ಯಾರ್ಹತೆಯ ಆಧಾರದ ಮೇಲೆ ಇಂಜಿನಿಯರಿಂಗ್, ಪದವಿ, ಐಟಿಐ ಗುಂಪು ಮಾಡಿ ಅವರಿಗೆ ಉದ್ಯೋಗ ದೊರಕುವ ಕ್ಷೇತ್ರ ಗುರುತಿಸಿ ತರಬೇತಿ ನೀಡಿ ಎಂದು ಹೇಳಿದರು.

ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಉತ್ತಮವಾಗಿದ್ದರೂ ಲಿಂಗಾನುಪಾತದ ವ್ಯತ್ಯಾಸ ಹೆಚ್ಚಿರುತ್ತದೆ. ಇದು ಸಮಾಜದಲ್ಲಿ ಹಾನಿಕಾರಕ ಬೆಳವಣಿಗೆಯಾಗಿರುತ್ತದೆ. ಎಲ್ಲ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ. ಮುಖ್ಯವಾಗಿ ಭ್ರೂಣ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆ ಜಿಲ್ಲೆಯಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಇನ್ನು ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ನೀಡಿ. ಜಿಲ್ಲೆಯಲ್ಲಿ ಅಂಗನವಾಡಿ ಹಾಗೂ ಶಾಲಾ ಕೊಠಡಿಗಳು ಬೀಳುವ ಹಂತದಲ್ಲಿದ್ದರೆ ತಕ್ಷಣ ಬೇರೆ ವ್ಯವಸ್ಥೆ ಮಾಡಿಕೊಡಬೇಕು. ನಂತರ ಕೊಠಡಿ ದುರಸ್ತಿಯ ಬಗ್ಗೆ ಕುರಿತ ವರದಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿ ಎಂದರು.

ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು 24 ಗಂಟೆ ಕಾಲಗಳೂ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಪಲಿತಾಂಶ ಬರುವಂತೆ ಯೋಜನೆ ರೂಪಿಸಬೇಕು. ರಾಷ್ಟ್ರಮಟ್ಟದ ವೃತ್ತಿಪರ ಕೌಶಲ ಪ್ರದರ್ಶನಕ್ಕೆಂದು ಇಂಡಿಯಾ ಸ್ಕಿಲ್ಸ್ ಸ್ಪರ್ಧೆ ಆಯೋಜಿಸಲಾಗಿದೆ. ಇದಕ್ಕೆ ನೋಂದಣಿ ಮಾಡಿಕೊಳ್ಳಲು ಸೆ.30 ಕೊನೆಯ ದಿನವಾಗಿದೆ. ಆದ್ದರಿಂದ ಸಂಬಂಧಪಟ್ಟವರು ಹೆಚ್ಚಿನ ಗಮನಹರಿಸಿ 16 ರಿಂದ 25 ವರ್ಷದೊಳಗಿನ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಳ್ಳುವಂತೆ ಮಾಡಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಅವರು ಜಿಲ್ಲೆಯಲ್ಲಿ ಆಗಿರುವ ಮಳೆಯ ಪ್ರಮಾಣ, ಬಿತ್ತನೆ ಬೀಜ, ಬೆಳೆ ಹಾನಿ, ಮನೆ ಹಾನಿ ಪ್ರಕರಣ, ರಸಗೊಬ್ಬರ, ಆಧಾರ್ ಸೀಡಿಂಗ್, ಭೂ ಸುರಕ್ಷಾ ಯೋಜನೆ ಹಾಗೂ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯಲ್ಲಿ ಕೈಗೊಳ್ಳಬೇಕಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಸಭೆಗೆ ವಿವರಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ, ಸಭೆಗೆ ಮನರೇಗಾ ಯೋಜನೆ, ಜಲ ಜೀವನ್ ಮಿಷನ್ ಯೋಜನೆ ಹಾಗೂ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಕುರಿತಂತೆ ಸಭೆಗೆ ವಿವರಣೆ ನೀಡಿದರು.

ಸಭೆಯಲ್ಲಿ ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಮುಡಾ ಆಯುಕ್ತ ಕೃಷ್ಣಕುಮಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯಿತಿ ಇಒಗಳು ಭಾಗವಹಿಸಿದ್ದರು.