ಮಂಡ್ಯ: ಅಧಿಕಾರಿಗಳು ತಮ್ಮ ಕೆಲಸ ಹಾಗೂ ಜವಾಬ್ದಾರಿ ಅರಿತುಕೊಂಡು ನಿಷ್ಠೆಯಿಂದ ಉತ್ತಮವಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.
ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಪಿಡಿಒಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಯಪಾಲನೆ ಜತೆಗೆ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಬೇಕು. ಅಧಿಕಾರಿಗಳು ಯಾವ ರೀತಿಯಲ್ಲಿ ಕೆಲಸ ಮಾಡಬೇಕು ಮತ್ತು ಗ್ರಾಮ ಪಂಚಾಯಿತಿಯಲ್ಲಿ ಹೇಗೆ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕೆಂದು ತಿಳಿದುಕೊಳ್ಳಬೇಕು. ಪಿಡಿಒಗಳು ಗ್ರಾಮಾಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ವಹಿಸಬೇಕು. ಆಗ ಮಾತ್ರ ಗ್ರಾಮ ಮತ್ತು ಯೋಜನೆಗಳು ಪ್ರಗತಿ ಸಾಧಿಸಬಹುದು. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗೆ ಖುದ್ದು ಭೇಟಿ ನೀಡಿ ಕಡತ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಜಿಪಂ ಮುಖ್ಯಯೋಜನಾಧಿಕಾರಿ ಧನುಷ್, ಉಪ ಕಾರ್ಯದರ್ಶಿ(ಅಭಿವೃದ್ಧಿ) ಚಂದ್ರ, ಉಪ ಕಾರ್ಯದರ್ಶಿ (ಆಡಳಿತ) ರವೀಂದ್ರ, ಮಂಡ್ಯ ತಾಪಂ ಇಒ ವೀಣಾ ಇತರರಿದ್ದರು.