ಜಿಲ್ಲೆ

ಅನುದಾನ ಕೋರಿ ಸರ್ಕಾರಕ್ಕೆ ಪತ್ರ: ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಕಳೆದ ವರ್ಷ ಉದ್ಯೋಗಿನಿ ಯೋಜನೆಯಡಿ 83 ಸಾವಿರ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಂತೆಯೇ ಗುರಿಯನ್ನು ಹೆಚ್ಚು ಮಾಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪದ್ಮಾವತಿ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಡಾ.ಜೆ.ಎಲ್.ಜವರೇಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಮಹಿಳೆಯು ಸ್ವಾವಲಂಬಿಯಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮಹಿಳೆಯರ ಸಬಲೀಕರಣಕ್ಕಾಗಿರುವ ಯೋಜನೆಯನ್ನು ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಬೇಕು. ಮುಖ್ಯವಾಗಿ ಯೋಜನೆ ಪಡೆಯಲು ಮಹಿಳೆಯರನ್ನು ಅಲೆದಾಡಿಸಬೇಡಿ. ಅವರಿಗೆ ಸ್ಪಷ್ಟ ಮಾಹಿತಿ ನೀಡುವುದರ ಜತೆಗೆ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಿ ಎಂದರು.

ನಿಗಮದಿಂದ ದೇವದಾಸಿಯರಿಗೆ ಪಿಂಚಣಿ, ಎಚ್‌ಐವಿ ಸೊಂಕಿತರಿಗೆ ಸಹಾಯಧನ, ಧಮನಿತ ಹಾಗೂ ಅಂಗವಿಕಲ ಮಹಿಳೆಯರಿಗೆ ಸಾಕಷ್ಟು ರೀತಿಯ ಸಹಾಯಧನವನ್ನು ನೀಡುತ್ತಿದೆ. ಮಹಿಳೆಯರ ಸಬಲೀಕರಣಕ್ಕಾಗಿ ಕಿರುಸಾಲ ಯೋಜನೆ, ಮಾರುಕಟ್ಟೆ ನೆರವು ಹಾಗೂ ಸ್ತ್ರೀಶಕ್ತಿ ಸಂಘಗಳ ಒಕ್ಕೂಟಕ್ಕೆ ಕೈಸಾಲ ನೀಡುವಂತೆ ಒಟ್ಟು 3 ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ 5 ಲಕ್ಷ ರೂ ಸಾಲವನ್ನು ಫ್ಯಾನ್ಸಿ ಸ್ಟೋರ್, ಪ್ರಾವಿಜನ್ ಸ್ಟೋರ್, ಬಳೆ ಅಂಗಡಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದರೂ ಎಲ್ಲ ರಂಗದಲ್ಲಿಯೂ ಮುನ್ನುಗ್ಗಿ ತನ್ನ ಛಾಪನ್ನು ಮೂಡಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು ಸ್ವಾವಲಂಬಿಗಳಾಗಿದ್ದಾರೆ. ಜಿಲ್ಲಾಡಳಿತವು ಕೂಡ ಉತ್ತಮ ರೀತಿಯಲ್ಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ ಮಾತನಾಡಿ, ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಇಲಾಖೆ ವತಿಯಿಂದ ಸುಮಾರು 42 ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದರ ಉದ್ದೇಶ ಸಮಾಜದಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣುವುದಾಗಿದೆ. ಹೆಣ್ಣು ಮಕ್ಕಳ ಮೇಲೆ ಆಗುವಂತಹ ದೌರ್ಜನ್ಯ, ದಬ್ಬಾಳಿಕೆ, ಶೋಷಣೆ, ಬಾಲ್ಯ ವಿವಾಹ, ಅತ್ಯಾಚಾರ, ವರದಕ್ಷಿಣೆ ಇನ್ನಿತರೆ ಅಂಶಗಳಿಂದ ಮಹಿಳೆಯರನ್ನು ರಕ್ಷಣೆ ಮಾಡಬೇಕು ಎಂದು ಹೇಳಿದರು.

ಉದ್ಯೋಗಿನಿ ಯೋಜನೆ, ಧನಶ್ರೀ ಯೋಜನೆ, ಚೇತನಾ ಯೋಜನೆ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಮಹಿಳಾ ತರಬೇತಿ ಯೋಜನೆ ಸೇರಿದಂತೆ ಸರ್ಕಾರವು ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಉದ್ಯೋಗಿನಿ ಯೋಜನೆಯಡಿ 3,334 ಫಲಾನುಭವಿಗಳಿಗೆ 5,24,44,380 ರೂ ಸಹಾಯಧನ ಬಿಡುಗಡೆಯಾಗಿದೆ. ಕಿರುಸಾಲ ಯೋಜನೆಯಡಿ 94 ಫಲಾನುಭವಿಗೆ 1,71,85,000 ರೂ, ಸಮೃದ್ಧಿ ಯೋಜನೆಯಲ್ಲಿ 1,227 ಫಲಾನುಭವಿಗಳಿಗೆ 1,22,70,000 ರೂ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಯಡಿ 163 ಫಲಾನುಭವಿಗಳಿಗೆ 53,03,880 ರೂ, ಧನಶ್ರೀ ಯೋಜನೆಯಡಿಯಲ್ಲಿ 158 ಫಲಾನುಭವಿಗೆ 71,33,700 ರೂ ಹಾಗೂ ಚೇತನ ಯೋಜನೆಯಡಿಯಲ್ಲಿ 93 ಫಲಾನುಭವಿಗಳಿಗೆ 42,36,100 ರೂ ಸಹಾಯಧನ ನೀಡಲಾಗಿದೆ ಎಂದು ವಿವರಿಸಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್ ಮಾತನಾಡಿ, ಜಿಲ್ಲೆಯ ಮಹಿಳೆಯರು ಸರ್ಕಾರದ ಯೋಜನೆಗಳಾದ ಉದ್ಯೋಗಿನಿ ಹಾಗೂ ಇನ್ನಿತರೆ ಯೋಜನೆಯ ಮೂಲಕ ಸ್ವಂತ ವ್ಯಾಪಾರ ಮತ್ತು ಇನ್ನಿತರೆ ಕೆಲಸದಿಂದ ಆರ್ಥಿಕವಾಗಿ ಸಬಲರಾಗಲು ಕಿರುಸಾಲ ಹಾಗೂ ಸಹಾಯಧನವನ್ನು ನೀಡಲಾಗಿದೆ. ಇಂತಹ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದು ಅಧಿಕ ಬಡ್ಡಿಯನ್ನು ಕಟ್ಟಲಿಕ್ಕೆ ಹೋಗಬೇಡಿ. ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ತೊಂದರೆಗಳಿದ್ದಲ್ಲಿ ನಮ್ಮ ಗಮನಕ್ಕೆ ತರುವ ಕೆಲಸ ಮಾಡಿ ಎಂದರು.

ಸಭೆಯಲ್ಲಿ ಮಹಿಳಾ ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಲಕ್ಷ್ಮೀ ಚಂದ್ರಾಜು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಅಭಿವೃದ್ಧಿ ನಿರೀಕ್ಷಕಿ ಮಹಾದೇವಮ್ಮ ಸೇರಿದಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಟ್ರಾನ್ಸ್‌ಜೆಂಡರ್ ಗುರುತಿನ ಚೀಟಿ ಹಾಗೂ ಗೃಹಲಕ್ಷ್ಮೀ ಯೋಜನೆ ಆದೇಶ ಪತ್ರ ವಿತರಿಸಲಾಯಿತು.