ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಸಹಜೀವನಂ ಸ್ನೇಹ ಗ್ರಾಮ ಮಾದರಿ ಶಿಶುಪಾಲನಾ ಕೇಂದ್ರಗಳಿಗೆ ಥೆರಪಿಸ್ಟ್‌ಗಳು ಹಾಗೂ ವಿಶೇಷ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿಗಾಗಿ ಸ್ಥಳೀಯ ತಜ್ಞರನ್ನು ಗುರುತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಉನ್ನತ ಶಿಕ್ಷಣ ಸಚಿವೆ ಡಾ.ಆರ್.ಬಿಂದು ಸೂಚಿಸಿದರು.
ಸಹಜೀವನಂ ಸ್ನೇಹಗ್ರಾಮ ಹಾಗೂ ಮಾದರಿ ಶಿಶುಪಾಲನಾ ಕೇಂದ್ರಗಳ ಕಾರ್ಯವೈಖರಿ ಪರಿಶೀಲನೆಗಾಗಿ, ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಂಡೋ ಸಂತ್ರಸ್ತರಿಗೆ ಮೂರನೇ ಹಂತದಲ್ಲಿ ಸಾಯಿ ಟ್ರಸ್ಟ್ ವತಿಯಿಂದ ಮನೆ ನಿರ್ಮಾಣಕ್ಕೆ ಪರಪ್ಪ ಗ್ರಾಮದಲ್ಲಿ ನಿವೇಶನ ಹಂಚಿಕೆಗೆ ಭೂಸ್ಕೆಚ್ ಹಾಗೂ ಒಪ್ಪಿಗೆ ಪತ್ರವನ್ನು ಸಚಿವೆ ಆರ್.ಬಿಂದು, ಸಾಯಿ ಟ್ರಸ್ಟ್ ಜಿಲ್ಲಾಧ್ಯಕ್ಷ ವಕೀಲ ಮಧುಸೂದನ್ ಅವರಿಗೆ ಹಸ್ತಾಂತರಿಸಿದರು.
ಸಾಮಾಜಿಕ ನೀತಿ ಇಲಾಖೆ ನಿರ್ದೇಶಕ ಎಚ್.ದಿನೇಶ್, ಶಾಸಕರಾದ ಎನ್.ಎ ನೆಲ್ಲಿಕುನ್ನು, ಸಿ.ಎಚ್ ಕುಞಂಬು, ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಮೊದಲಾದವರು ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯ ತಜ್ಞ ಚಿಕಿತ್ಸಕರಿಗೆ ಸರ್ಕಾರ ನಿಗದಿಪಡಿಸಿದ ವೇತನಕ್ಕೆ ಹೆಚ್ಚುವರಿಯಾಗಿ ಪ್ರೋತ್ಸಾಹಧನ ನೀಡಲು ವಿಶೇಷ ಅನುಮತಿ ಕೋರಿ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ. ಜಿಲ್ಲೆಯ ಬಡ್ಸ್ ಶಾಲೆಗಳಲ್ಲಿ 46 ನೌಕರರು ಸಾಮಾಜಿಕ ಭದ್ರತೆ ಹೊಂದಿದ್ದು, ಮಿಷನ್ ವೇತನ ಪಾವತಿಸುತ್ತದೆ. ಮುಖ್ಯಮಂತ್ರಿ ಮಟ್ಟದಲ್ಲಿ ನಡೆದ ಸಭೆಯ ತೀರ್ಮಾನ ಇದಾಗಿದ್ದು, ಮುಂಬರುವ ಅಕ್ಟೋಬರ್‌ನಿಂದ ಚಾಲಕ ಮತ್ತು ಅಡುಗೆಯವರನ್ನು ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಸಾಮಾಜಿಕ ಭದ್ರತಾ ಮಿಷನ್ ವೇತನ ನೀಡಲಿದೆ ಎಂದರು.
ಎಂಡೋ ಸಂತ್ರಸ್ತರ ಕಲ್ಯಾಣಕ್ಕಾಗಿ ಸಾಮಾಜಿಕ ಬದ್ಧತಾ ನಿಧಿ, ಸಂಸದ ಹಾಗೂ ಶಾಸಕರ ನಿಧಿ, ಸ್ಥಳೀಯಾಡಳಿತ ಸಂಸ್ಥೆಗಳ ಯೋಜನಾ ನಿಧಿ ಅಗತ್ಯ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೊಸದಾಗಿ ಸಂತ್ರಸ್ತರ ಪತ್ತೆಗೆ ಹಾಗೂ ಈಗಾಗಲೇ ನಡೆಸಿರುವ ವೈದ್ಯಕೀಯ ಶಿಬಿರದಲ್ಲಿ ಪಟ್ಟಿಯಿಂದ ಹೊರಗುಳಿದಿರುವ 1300ಕ್ಕೂ ಹೆಚ್ಚು ಸಂತ್ರಸ್ತರನ್ನು ಪರಿಗಣಿಸಲು ನಿರ್ಧರಿಸಲಾಗಿದೆ. ವೈದ್ಯಕೀಯ ಶಿಬಿರ ನಡೆಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದ್ದು, ಕೇರಳ ಸಾಮಾಜಿಕ ಭದ್ರತಾ ಮಿಷನ್ 15 ಲಕ್ಷ ರೂ. ಮೊತ್ತ ಮಂಜೂರು ಮಾಡಲಿದೆ. ಅಗತ್ಯವಿರುವ ಹೆಚ್ಚುವರಿ ಮೊತ್ತವನ್ನು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಿಂದ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಸಚಿವೆ ತಿಳಿಸಿದರು.