ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ನಡೆಯಿತು.  
ಜಿಲ್ಲೆ

ಉಡುಪಿ ಜಿಲ್ಲೆಗೆ 42 ಟವರ್ ಮಂಜೂರು

ಇಂದಿರಾ ಎನ್ ಕೆ

ಬೈಂದೂರು: ಕೇಂದ್ರ ಸರ್ಕಾರ 4ಜಿ ಸ್ಯಾಚುವೇಷನಲ್ ಯೋಜನೆಯಡಿ ಉಡುಪಿ ಜಿಲ್ಲೆಗೆ 42 ಟವರ್ ಮಂಜೂರು ಮಾಡಿದ್ದು, ಅದರಲ್ಲಿ 22 ಟವರ್‌ಗಳನ್ನು ಬೈಂದೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ದೊರೆತಿದೆ, 22 ಟವರ್‌ಗಳ ಪೈಕಿ 19 ಟವರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ತಿಂಗಳಾಂತ್ಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಲ್ಲಿನ ಆಡಳಿತಸೌಧದಲ್ಲಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ನೆಟ್‌ವರ್ಕ್ ವ್ಯವಸ್ಥೆ ಇಲ್ಲದ ಗ್ರಾಮಗಳಿಗೆ ನೇರ ಸ್ಯಾಟಲೈಟ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದ್ದು, ಉಡುಪಿ ಜಿಲ್ಲೆಯಲ್ಲಿ ಅಂತಹ ಗ್ರಾಮ ಗುರುತಿಸಿ ವರದಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರಧಾನಿಯವರ ಡಿಜಿಟಲ್ ಇಂಡಿಯಾ ಕಲ್ಪನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಕುಗ್ರಾಮಗಳಿಗೂ ನೆಟ್‌ವರ್ಕ್ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದರು. ಶಾಸಕ ಗುರುರಾಜ ಗಂಟಿಹೊಳೆ, ಬೈಂದೂರು ತಹಸೀಲ್ದಾರ್ ಪ್ರದೀಪ್ ಆರ್., ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ ಮತ್ತಿತರ ಇಲಾಖಾಧಿಕಾರಿಗಳು ಇದ್ದರು.

ಬೈಂದೂರು-ರಾಣಿಬೆನ್ನೂರು ರಾಷ್ಟ್ರೀಯ ಹೆದ್ದಾರಿ ದ್ವಿಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾಗಿದ್ದು, ವೈಲ್ಡ್‌ಲೈಫ್ ಕ್ಲೀಯರಿನ್ಸ್ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಬಗ್ಗೆ ಶೀಘ್ರ ಸಂಬಂಧಿತ ಅಧಿಕಾರಿಗಳು, ಭೂಸಂತೃಸ್ತರ ಸಭೆ ನಡೆಸಲಾಗುವುದು. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಯಾವುದೇ ಅನ್ಯಾಯವಾಗದಂತೆ ಸಮಸ್ಯೆ ಬಗೆಹರಿಸಲಾವುದು.-ಬಿ.ವೈ.ರಾಘವೇಂದ್ರ ಸಂಸದ