ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆ 
ಜಿಲ್ಲೆ

ತಂಬಾಕು ವ್ಯಸನ, ಜನಜಾಗೃತಿ ಮೂಡಿಸಬೇಕು

ಶಿವರಾಜ.ಎಂ

ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸೂಚನೆ

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತು ಜಿಲ್ಲಾದ್ಯಂತ ಜನಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಸೂಚಿಸಿದರು.
ದೇವನಹಳ್ಳಿ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ತಂಬಾಕು ಮುಕ್ತ ದಿನದ ಕಾರಣದಿಂದಾಗಿ ಎಲ್ಲ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿಗಳನ್ನು ಮೇ 31 ರ ಒಳಗಾಗಿ ತಂಬಾಕು ಮುಕ್ತ ಮಾಡುವ ಸಂಬಂಧ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಭಿತ್ತಿ ಪತ್ರ, ನಾಮಫಲಕಗಳನ್ನು ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲು ಕ್ರಮ ಕೈಗೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ತಂಬಾಕು ಸೇವನೆ ನಿಯಂತ್ರಿಸಲು ಹೆಚ್ಚು ಕಾರ್ಯ ಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಹಾಗೂ ತಾಲೂಕು ಮತ್ತು ಸ್ಥಳೀಯ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯ ಪ್ರವೃತ್ತರಾಗಿ ತಂಬಾಕು ನಿಯಂತ್ರಣಕ್ಕೆ ಕ್ರಮವಹಿಸಲು ತಿಳಿಸಿದರು.
ನಿಯಮ ಉಲ್ಲಂಘನೆ ವಿರುದ್ಧ ಕ್ರಮಕೈಗೊಳ್ಳಿ: ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳು ಹಾಗೂ ತಂಬಾಕು ನಿಯಂತ್ರಣ ಕಾನೂನು ಕೊಟ್ಪಾ 2003ರ ಕಾಯ್ದೆ ಬಗ್ಗೆ ಶಾಲಾ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ಸಾರ್ವಜನಿಕ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ಅಂಗಡಿಗಳಲ್ಲಿ ಕೈಗಾರಿಕೆಗಳಲ್ಲಿ ತಂಬಾಕು ಸೇವನೆ ನಿಷೇಧ ಬಗೆಗಿನ ನಾಮಫಲಕಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಯಾರು ಪ್ರದರ್ಶಿಸುತ್ತಿಲ್ಲ ಅಂತವರ ವಿರುದ್ಧ ಕ್ರಮ ಕೈಗೊಳ್ಳಬೇಕು , ತಂಬಾಕು ವ್ಯಸನೆಯಿಂದ ಆರೋಗ್ಯ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಕಾಲ ಕಾಲಕ್ಕೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಎಂದು ಡಿಸಿ ಅಧಿಕಾರಿಗಳಿಗೆ ಸೂಚಿಸಿದರು. ತಂಬಾಕು ನಿಯಂತ್ರಣ ಕಾನೂನಿನಡಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ. ಇದರನ್ವಯ ಸಾರ್ವಜನಿಕ ಸ್ಥಳಗಳಲ್ಲಿ ಮಾಲೀಕರು ನಾಮಫಲಕಗಳನ್ನು ಪ್ರದರ್ಶಿಸಬೇಕು. ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಉತ್ತೇಜನ, ಪ್ರಾಯೋಜಕತೆ ನಿಷೇಧ ಮಾಡಲಾಗಿದೆ. ಇದರ ಅನ್ವಯ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿಗಳಲ್ಲಿ ತಂಬಾಕು ಜಾಹೀರಾತುಗಳನ್ನು ಪ್ರಚಾರ ಮಾಡುವಂತಿಲ್ಲ, ದೃಶ್ಯ ಹಾಗೂ ಮುದ್ರಣ ಮಾಧ್ಯಮದ ಮೂಲಕ ತಂಬಾಕು ಉತ್ಪನ್ನಗಳ ಜಾಹೀರಾತು ಮಾಡುವಂತಿಲ್ಲ. ತಂಬಾಕು ಉತ್ಪನ್ನಗಳನ್ನು 18 ವರ್ಷದೊಳಗಿನ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮಾರಾಟ ಮಾಡುವಂತಿಲ್ಲ. ಈ ಕಾನೂನುಗಳನ್ನು ಉಲ್ಲಂಘಿಸಿದಲ್ಲಿ ದಂಡ ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಶಿಕ್ಷಣ ಸಂಸ್ಥೆಗಳ ನೂರು ಅಡಿಯ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ್ಲ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಮೇಲೆ ಶೇ. 85 ನಿರ್ದಿಷ್ಟ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವಂತಿಲ್ಲ ಎಂದು ಹೇಳಿದರು.
ಎಚ್ಚರಿಕೆ ನೀಡಿ ದಂಡ ವಿಧಿಸಿ: ತಂಬಾಕು ವ್ಯಸನಿಗಳನ್ನು ಹೆಚ್ಚು ಪತ್ತೆ ಮಾಡಿ ಸಮಾಲೋಚನೆ ನಡೆಸಿ, ತಂಬಾಕು ವ್ಯಸನ ಮುಕ್ತರನ್ನಾಗಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಿ ಎಂದರಲ್ಲದೆ, ಕಾನೂನು ಪಾಲಿಸದೆ ತಂಬಾಕು ವಸ್ತುಗಳನ್ನು ಮಾರಾಟ ಮಾಡುವ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಅಂತವರಿಗೆ ಎಚ್ಚರಿಕೆ ನೀಡಿ ದಂಡ ವಿಧಿಸಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು. ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಸೇರಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಿ ಕಾರ್ಯಕ್ರಮ ಯಶಸ್ವಿಯಾಗಲು ಶ್ರಮಿಸಬೇಕು ಎಂದರು.
ಮೊಬೈಲ್ ಆ್ಯಪ್ ಬಳಸಿ: ತಂಬಾಕು ನಿಯಂತ್ರಿಸಲು ರೂಪುಗೊಂಡಿರುವ ಸ್ಟಾಪ್ ಟ್ಯೊಬ್ಯಾಕೋ ಆ್ಯಪನ್ನು ಅಧಿಕಾರಿಗಳು ಸೇರಿ ಸಾರ್ವಜನಿಕರು ಸಹ ಬಳಸಬಹುದಾಗಿದೆ. ಕಾನೂನು ಬಾಹಿರವಾಗಿ ತಂಬಾಕು ಮಾರಾಟ ಮಾಡುತ್ತಿರುವ ಪ್ರದೇಶದ ಕುರಿತು ಈ ಆ್ಯಪ್ ಮೂಲಕ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡಿದ ಸಾರ್ವಜನಿಕರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ತಂಬಾಕು ಬಳಕೆಯನ್ನು ನಿಯಂತ್ರಿಸಲು ಸಾರ್ವಜನಿಕರು ಸಹ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.