ಜಿಲ್ಲೆ

ಗ್ಯಾರಂಟಿಯಿಂದ ರಾಜ್ಯದ ಅಭಿವೃದ್ಧಿ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಳಿಸಿದನಂತರ ರಾಜ್ಯ ಆಧುನಿಕ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ.ಎನ್ ಹೆಗಡೆ ಹೇಳಿದರು.

ದೇವನಹಳ್ಳಿಯ ಜಿಪಂ ಸಭಾಂಗಣದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು. ಹಸಿವು ಮುಕ್ತ ಕರ್ನಾಟಕ, ಮಹಿಳೆಯರ ಸಬಲೀಕರಣ, ಸ್ವಾವಲಂಬಿ ಬದುಕಿಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ. ಯಾರ ಹಸ್ತಕ್ಷೇಪ, ಮಧ್ಯವರ್ತಿಗಳ ಹಾವಳಿ ಇಲ್ಲದೆ ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳು ತಲುಪುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಪಂಚ ಗ್ಯಾರಂಟಿಗಳು ದೇಶದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದುಕೊಂಡು, ಇತರೆ ರಾಜ್ಯಗಳೂ ನಮ್ಮ ರಾಜ್ಯದ ಪಂಚ ಗ್ಯಾರಂಟಿ ಯೋಜನೆಗಳ ಮಾದರಿ ಜಾರಿಗೊಳಿಸುತ್ತಿರುವುದು ವಿಶೇಷ ಎಂದರು. ರಾಜ್ಯವು ಆಧುನಿಕವಾಗಿ ಅಭಿವೃದ್ಧಿ ಆಗುತ್ತಿದ್ದು ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಬಡವರ, ಹಿಂದುಳಿದವರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ಇಂತಹ ಅನುಕೂಲಕರ ವಾತಾವರಣ ಸೃಷ್ಟಿಗೊಳಿಸಿದ ಪಂಚ ಗ್ಯಾರಂಟಿಗಳ ಬಗ್ಗೆ ಹೆಚ್ಚು ಪ್ರಚಾರ ಆಗಬೇಕಿದೆ.ಎಲ್ಲೆಡೆ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ ಯೋಜನೆಗಳ ಅನುಕೂಲದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಸದಸ್ಯರಿಗೆ ತಿಳಿಸಿದರು.

ಲಾನುಭವಿಗಳ ಅಭಿಪ್ರಾಯ ಆಲಿಸಿದರು: ಸಭೆಯ ನಂತರ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮಕ್ಕೆ ಭೇಟಿ ನೀಡಿದ ಸೂರಜ್ ಹೆಗಡೆ ಅಲ್ಲಿನ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಅಭಿಪ್ರಾಯ ಪಡೆದುಕೊಂಡರು. ಅಕ್ಕಿ ಖರೀದಿಗೆ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಉಚಿತ ಅಕ್ಕಿ ನೀಡುತ್ತಿರುವುದರಿಂದ ಕುಟುಂಬದ ಎಲ್ಲ ಸದಸ್ಯರು ಹೊಟ್ಟೆ ತುಂಬಾ ಊಟ ಮಾಡುವಂತಾಗಿದೆ ಹಾಗೆಯೇ ಆರ್ಥಿಕವಾಗಿ ಕೂಡ ಉಳಿತಾಯವಾಗುತ್ತಿದೆ. ಅನ್ನಭಾಗ್ಯ ಯೋಜನೆಯಿಂದ ನಮಗೆ ಸಾಕಷ್ಟು ಅನುಕೂಲ ವಾಗಿದೆ ಎಂದು ಫಲಾನುಭವಿಗಳ ಅಭಿಪ್ರಾಯ ವ್ಯಕ್ತಪಡಿಸಿದರು. ದೇವನಹಳ್ಳಿಯ ಕೆಇಬಿ ಕಚೇರಿ ಬಳಿಯ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ಯೋಜನೆಯ ಫಲಾನುಭವಿಗಳನ್ನು ಮಾತನಾಡಿಸಿದರು. ಗೃಹ ಲಕ್ಷ್ಮೀ ಹಣದಿಂದ ದಿನ ನಿತ್ಯದ ಮಾತ್ರೆ ಸೇವನೆಗೆ ಔಷಧಿ ಖರೀದಿ, ಮಕ್ಕಳ ಶಾಲಾ ಶುಲ್ಕ ಕಟ್ಟಲು ಚಿಲ್ಲರೆ ಅಂಗಡಿ ತೆರೆಯಲು ಸಹಾಯವಾಗಿದೆ ಎಂದು ಫಲಾನುಭವಿಗಳು ಹೇಳಿದರು. ಯುವ ನಿಧಿ ಯೋಜನೆಯ ಫಲಾನುಭವಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪುಸ್ತಕ ಖರೀದಿಸಲು, ತರಬೇತಿ ಪಡೆದುಕೊಳ್ಳಲು ಹೆಚ್ಚು ಅನುಕೂಲವಾಗಿದೆ ಎಂದರು. ದೇವನಹಳ್ಳಿ ಸಹಕಾರ ಕೇಂದ್ರದಲ್ಲಿನ ಅಕ್ಕಿ ಗೋದಾಮುಗೆ ಭೇಟಿ ನೀಡಿ ಅನ್ನಭಾಗ್ಯ ಫಲಾನುಭವಿಗಳ ಅಭಿಪ್ರಾಯ ಪಡೆದರು. ದೇವನಹಳ್ಳಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಫಲಾನುಭವಿಗಳ ಅಭಿಪ್ರಾಯ ಆಲಿಸಿದರು.