ವಿಜಯಪುರ ನಗರದ ಎಕ್ಸಲಂಟ್ ವಿಜ್ಞಾನ ಪಪೂ ಕಾಲೇಜ್‌ನಲ್ಲಿ ಸೋಮವಾರ ಸಂಜೆ ನಡೆದ ಶಿಕ್ಷಕ ದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭವನ್ನು ರಾಮಕೃಷ್ಣ ಆಶ್ರಮದ ನರೇಶನಾಂದ ಸ್ವಾಮೀಜಿ ಉದ್ಘಾಟಿಸಿದರು. ಬಸವರಾಜ ಕೌಲಗಿ, ಜೆ.ಎಸ್.ಪೂಜೇರಿ, ಡಿ.ಎಲ್.ಬನಸೋಡೆ, ಪರಶುರಾಮ ಭಾವಿಕಟ್ಟಿ ಇತರರಿದ್ದರು. 
ಜಿಲ್ಲೆ

ಶಿಕ್ಷಣ ವ್ಯವಸ್ಥೆಯಿಂದ ದೇಶದ ಪ್ರಗತಿ ಸಾಧ್ಯ - ರಾಮಕೃಷ್ಣ ಆಶ್ರಮದ ನರೇಶಾನಂದ ಸ್ವಾಮೀಜಿ ಅಭಿಮತ

ವಿಜಯಪುರ: ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಹಗಲಿರುಳು ಪ್ರಯತ್ನಿಸುವ ಶಿಕ್ಷಕರು ರಾಷ್ಟ್ರ ನಿರ್ಮಾತೃಗಳಾಗಿದ್ದಾರೆ ಎಂದು ವಿಜಯಪುರ ರಾಮಕೃಷ್ಣ ಆಶ್ರಮದ ನರೇಶನಾಂದ ಸ್ವಾಮೀಜಿ ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಕಾಲನಿಯಲ್ಲಿರುವ ಎಕ್ಸಲಂಟ್ ವಿಜ್ಞಾನ ಪಪೂ ಕಾಲೇಜ್‌ನಲ್ಲಿ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕ ದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುವ ಎಕ್ಸಲಂಟ್ ಕಾಲೇಜ್ ಉಪನ್ಯಾಸಕರು ಅಭಿನಂದನಾರ್ಹರು. ಭಾರತ ರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ತಮ್ಮ ಜನ್ಮದಿನವನ್ನು ಶಿಕ್ಷಕ ದಿನವನ್ನಾಗಿ ಆಚರಿಸಲು ಸೂಚಿಸಿ, ಶಿಕ್ಷಕ ಸಮುದಾಯದ ಘನತೆ-ಗೌರವವನ್ನು ಹೆಚ್ಚಿಸಿದ್ದಾರೆ. ಸಮಾಜವನ್ನು ಪರಿವರ್ತಿಸಿದ ಅಥರ್ಗಾದ ರೇವಣಸಿದ್ದೇಶ್ವರ ಮಾಸ್ತರರನ್ನು ದೈವವಾಗಿ ಕಂಡು, ಗುಡಿ ಕಟ್ಟಿ, ಅವರ ಹೆಸರಿನಲ್ಲಿ ಜಾತ್ರೆ ಮಾಡುವ ಜಿಲ್ಲೆ ನಮ್ಮದು ಎಂದರು.

ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಜೆ.ಎಸ್.ಪೂಜೇರಿ ಮಾತನಾಡಿ, ಇಂದಿನ ಶಿಕ್ಷಣದ ವೈಲ್ಯಕ್ಕೆ ರಾಜಕಾರಣಿಗಳಾಗಲಿ, ಆಡಳಿತ ಮಂಡಳಿಯಾಗಲಿ ಕಾರಣವಲ್ಲ. ಶಿಕ್ಷಣದ ವೈಲ್ಯದ ಜವಾಬ್ದಾರಿಯನ್ನು ಶಿಕ್ಷಕರೇ ಹೊರಬೇಕಾಗುತ್ತದೆ. ಶಿಕ್ಷಕರು ಮನಸ್ಸು ಮಾಡಿದರೆ ಯಾವುದೇ ಹಣಕಾಸಿನ ನೆರವು ಇಲ್ಲದೆ ಶೈಕ್ಷಣಿಕ ಕ್ರಾಂತಿ ಮಾಡಬಹುದಾಗಿದೆ. ಅಂತಹ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ, ಸದಾ ಕಲಿಯುಲು ಸಿದ್ಧರಾದವರೇ ಯೋಗ್ಯ ಶಿಕ್ಷಕರಾಗಲು ಸಾಧ್ಯ. ರಾಧಾಕೃಷ್ಣನ್ ಅವರು ನಿರಂತರ ಅಧ್ಯಯನದಿಂದ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದ ಮಹಾನ್ ವ್ಯಕ್ತಿಗಳಾಗಿದ್ದಾರೆ. ಎರಡನೇ ಜಾಗತಿಕ ಯುದ್ಧದಿಂದ ತತ್ತರಿಸಿ ಹೋಗಿದ್ದ ಜಪಾನ್ ದೇಶವನ್ನು ಕ್ಷಿಪ್ರಗತಿಯಲ್ಲಿಯೇ ಪ್ರಗತಿ ಸಾಧಿಸುವಂತೆ ಮಾಡಿದ್ದು ಅಲ್ಲಿನ ಶಿಕ್ಷಕರು. ಇಂದೂ ಕೂಡ ಅತ್ಯಂತ ಚಿಕ್ಕ ರಾಷ್ಟ್ರ ಫಿನ್‌ಲ್ಯಾಂಡ್ ಹಾಗೂ ಜಪಾನ್ ದೇಶದ ಪ್ರಗತಿಗೆ ಅಲ್ಲಿನ ಶಿಕ್ಷಣ ವ್ಯವಸ್ಥೆ ಕಾರಣ ಎಂದರು.

ಇದೇ ವೇಳೆ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಯನ್ನು ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇತ್ತೀಚೆಗೆ ದುಬೈನಲ್ಲಿ ನಡೆದ ನಾಟ್ಯ ಪ್ರದರ್ಶನದಲ್ಲಿ ಪ್ರಥಮ ಬಹುಮಾನ ಪಡೆದ ವಿದ್ಯಾರ್ಥಿನಿಯರಾದ ವರ್ಷಿಣಿ ಅಗಸರ ಹಾಗೂ ಮಾನಸ ಅಗಸರ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಡಿ.ಎಲ್.ಬನಸೋಡೆ, ಕಾಲೇಜ್ ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ಇತರರು ಇದ್ದರು.