ಸಿದ್ದಾಪುರ: ತಾಲೂಕಿನ ಕಲ್ಲಾರೆಮನೆಯ ಸುಷಿರ ಸಂಗೀತ ಪರಿವಾರ ಭುವನಗಿರಿ ಅವರಿಂದ 9ನೇ ವರ್ಷದ ಸಂಯೋಜನೆಯಲ್ಲಿ ಗ್ರಾಮೀಣ ಕಲಾವಿದರು, ಸಾಧಕರ ಜತೆ ಸೇರಿ ಗ್ರಾಮಸ್ಥರ ಹಷೋತ್ಸವದ ಮೂಲಕ ವಿಭಿನ್ನವಾದ ಸ್ವಾತಂತ್ರ ಸಂಭ್ರಮಾಚರಣೆಯನ್ನು ಭಾನ್ಕುಳಿ ಸನ್ಯಾಸಿಕೆರೆ ಹತ್ತಿರ ಮಂಗಳವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಶಿರಸಿಯ ರಾಜ್ದೀಪ್ ಟ್ರಸ್ಟ ಅಧ್ಯಕ್ಷ ದೀಪಕ ದೊಡ್ಡೂರು ಮಾತನಾಡಿ, ನಿರಂತರ 9 ವರ್ಷಗಳಿಂದ ಸುಷಿರ ಸಂಗೀತ ಪರಿವಾರ ಆಯೋಜಿಸಿಕೊಂಡು ಬರುತ್ತಿರುವ ಈ ಕಾರ್ಯಕ್ರಮ ವಿಭಿನ್ನವಾಗಿದೆ ಎಂದರು.
ಶಿರಸಿ ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಎ. ಹೆಗಡೆ ಮಾತನಾಡಿ ಸ್ವಾಭಿಮಾನದ, ದೇಶಪ್ರೇಮದ ಕೊರತೆ ನಮ್ಮಲ್ಲಿ ಸಾಕಷ್ಟಿದೆ. ಸ್ವಾತಂತ್ರŒದ ನಿಜ ಅರ್ಥವನ್ನು ನಾವು ತಿಳಿದಿಲ್ಲ. ನಮಗೆ ಆರ್ಥಿಕ ಸಬಲತೆ ಮುಖ್ಯ. ಹಳ್ಳಿಗಾಡಿನ ಕರಕುಶಲತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧ್ಯವಿದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಪತ್ರಕರ್ತ ಗಂಗಾಧರ ಕೊಳಗಿ ದೇಶಭಕ್ತಿ ಎನ್ನುವದು ಫ್ಯಾಷನ್ ಆಗಿರುವ, ಪ್ರದರ್ಶನವಾಗಿರುವ ಈ ಸಂದರ್ಭದಲ್ಲಿ ಗ್ರಾಮೀಣ ಭಾಗದ ಹಲವು ಊರುಗಳ ಸಹೃದಯರು ಒಂದಾಗಿ, ವಿನೂತನ ರೀತಿಯಲ್ಲಿ ದೇಶಕ್ಕೆ ಗೌರವಸಲ್ಲಿಸಿ,ಸಂಭ್ರಮಿಸುತ್ತಿರುವ ಇಂಥ ಕಾರ್ಯಕ್ರಮಗಳು ಅನುಕರಣೀಯ ಎಂದರು.
ಭುವನಗಿರಿ ಭುವನೇಶ್ವರಿ ದೇವಾಲಯ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಭಾರದ್ವಾಜ ಶಾಸ್ತ್ರಿ,ಭಾಸ್ಕರ ಹೆಗಡೆ ಗಮನಿ, ಸ್ವರಗಂಗಾ ಸಂಗೀತ ತರಬೇತಿ ತಂಡದ ಸದಸ್ಯೆಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಪರಮೇಶ್ವರ ಹೆಗಡೆ ಸ್ವಾಗತಿಸಿದರು. ಸುಷಿರ ಸಂಗೀತ ಪರಿವಾರದ ಮುಖ್ಯಸ್ಥ ನಾರಾಯಣ ಹೆಗಡೆ ಕಲ್ಲಾರೆಮನೆ ವಂದಿಸಿದರು.