ಜಿಲ್ಲೆ

ಗುರಿ ಸಾಧಿಸಲು ಸಂಕಲ್ಪ ಮಾಡಲಿ: ಜಿಪಂ ಸಿಇಒ ಕೆ.ಆರ್.ನಂದಿನಿ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಗ್ರಾಮ ಪಂಚಾಯಿತಿಗಳು ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಂಕಲ್ಪ ಮಾಡಬೇಕು. ಈ ಮೂಲಕ ಗ್ರಾಪಂನ ಸಮಗ್ರ ಅಭಿವೃದ್ಧಿ, ಕಾರ್ಯಕ್ಷಮತೆ ಹಾಗೂ ಪ್ರಗತಿಯನ್ನು ಉತ್ತಮಗೊಳಿಸಬೇಕು ಎಂದು ಗ್ರಾಪಂ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಸಲಹೆ ನೀಡಿದರು.

ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪಂಚಾಯಿತಿ ಪ್ರಗತಿ ಸೂಚ್ಯಂಕ 2.0 ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ ಸೇರಿದಂತೆ ಇತರೆ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಅಂತೆಯೇ ಬಡತನ ಮುಕ್ತ, ಆರೋಗ್ಯವಂತ, ಮಹಿಳಾ ಸ್ನೇಹಿ, ಮಕ್ಕಳ ಸ್ನೇಹಿ, ಸಾಮಾಜಿಕ ಸುರಕ್ಷಾ ಹಾಗೂ ಉತ್ತಮ ಮೂಲ ಸೌಕರ್ಯ ಹೊಂದಿರುವ ಗ್ರಾಮ ಪಂಚಾಯಿತಿಯನ್ನಾಗಿ ಶ್ರಮಿಸುವಂತೆ ತಿಳಿಸಿದರು.

ಪಂಚಾಯಿತಿ ಪ್ರಗತಿ ಸೂಚ್ಯಂಕದಲ್ಲಿ 9 ವಿಷಯವಿದ್ದು, ಪ್ರತಿ ಗ್ರಾಮ ಪಂಚಾಯಿತಿಯು 9 ವಿಷಯಗಳಲ್ಲಿಯೂ ನಿಗದಿತ ಗುರಿ ಸಾಧಿಸಿದಾಗ ಮಾತ್ರ ಉತ್ತಮ ಗ್ರಾಮ ಪಂಚಾಯಿತಿ ಆಗಲು ಸಾಧ್ಯ. ಆದ್ದರಿಂದ ಪಿಡಿಒಗಳು ತಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಚುನಾಯಿತ ಪ್ರತಿನಿಧಿಗಳು, ಇತರೆ ಇಲಾಖೆಗಳು ಹಾಗೂ ಸಾರ್ವಜನಿಕರ ಸಹಕಾರ ಪಡೆಯುವಂತೆ ಸೂಚಿಸಿದರು.

ಜಿಪಂ ಮುಖ್ಯ ಯೋಜನಾಧಿಕಾರಿ ಧನುಷ್, ಉಪ ಕಾರ್ಯದರ್ಶಿ(ಆಡಳಿತ) ಧನರಾಜ್, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ನಾಯಕ್, ಗ್ರಾ.ಪಂ ಚುನಾಯಿತ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ್, ಉಪಾಧ್ಯಕ್ಷೆ ಸುವರ್ಣಾವತಿ, ಸದಸ್ಯರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಪಂ ಇಒಗಳು, ಸಹಾಯಕ ನಿರ್ದೇಶಕರು, ಆಯ್ದ ಗ್ರಾಪಂ ಪಿಡಿಒ ಮತ್ತು ಡಿಇಒ ಹಾಜರಿದ್ದರು.

ಪ್ರಗತಿ ಸೂಚ್ಯಂಕಕ್ಕೆ ಮಾಹಿತಿ ದಾಖಲಿಸುವ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಸಹಾಯಕ ನಿರ್ದೇಶಕರು (ಪಂ.ರಾಜ್) ಹಾಗೂ 14ನೇ ಕಾಡೂರು ಗ್ರಾ.ಪಂ ಅಧ್ಯಕ್ಷ ಜಲೇಂದ್ರ ಶೆಟ್ಟಿ ಮಾಹಿತಿ ನೀಡಿದರು.