ಹನುಮಸಾಗರ: ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅಭಿವೃದ್ಧಿ ಸಾಧಿಸಬೇಕಾದರೆ ಎಲ್ಲರೂ ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಎಂದು ಬಾದಿಮನಾಳ ಕನಕ ಗುರು ಪೀಠದ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಬಾದಿಮನಾಳ ಗ್ರಾಮದಲ್ಲಿ ಭಾನುವಾರ ಭಕ್ತ ಶ್ರೇಷ್ಠ ಕನಕದಾಸ ಜಯಂತಿ ನಿಮಿತ್ತ ಕನಕದಾಸ ಹಾಗೂ ಸಂಗೊಳ್ಳಿ ರಾಯಣ್ಣ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಒಂದು ಸಮುದಾಯ ನ್ಯಾಯಸಮ್ಮತವಾಗಿ ಪ್ರಗತಿ ಸಾಧಿಸಲು ಶಿಕ್ಷಣ ಪ್ರಮುಖ ಅಸ್ತ್ರ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು.
ಸಾಹಿತ್ಯ ಕ್ಷೇತ್ರಕ್ಕೆ ಕನಕದಾಸರ ಕೊಡುಗೆ ಅಪಾರವಾಗಿದ್ದು, ಸರಳವಾಗಿ ಪ್ರತಿಯೊಬ್ಬರಿಗೂ ಅರ್ಥವಾಗುವ ರೀತಿಯಲ್ಲಿ ಕೀರ್ತನೆಗಳನ್ನು ರಚಿಸಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಎಲ್ಲರೂ ಕನಕದಾಸರ ಬಗ್ಗೆ ಓದಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪ್ರಮುಖರಾದ ಕಳಕಪ್ಪ ಗಟ್ಟಿ, ಭೀಮಪ್ಪ ಪರಸಾಪುರ, ರಾಮಪ್ಪ ವಾಲಿಕಾರ, ಕಳಕಪ್ಪ ಕ್ಯಾದಿಗುಂಪಿ, ಮಲ್ಲಪ್ಪ ಬ್ಯಾಳಿ, ರವಿ ಪರಸಾಪೂರ ಇತರರಿದ್ದರು.