ವಿಜಯವಾಣಿ ಸುದ್ದಿ ಜಾಲ ಚನ್ನರಾಯಪಟ್ಟಣ
ಗ್ರಾಮೀಣ ಅನುಭವ ಪಡೆಯಲು ಆಗಮಿಸಿರುವ ಕೃಷಿ ವಿವಿ ವಿದ್ಯಾರ್ಥಿಗಳನ್ನು ನಮ್ಮ ಗ್ರಾಮದ ಮಕ್ಕಳೆಂಬ ಭಾವನೆಯಿಂದ ಎಲ್ಲರೂ ಸಹಕರಿಸಬೇಕು ಎಂದು ಗ್ರಾಪಂ ಅಧ್ಯಕ್ಷೆ ನಾಗಮಣಿ ಮಂಜುನಾಥ್ ಹೇಳಿದರು.
ಹೋಬಳಿಯ ಐಬಸಾಪುರದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಸ್ಸಿ ಕೃಷಿ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗ್ರಾಮೀಣ ಅನುಭವ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಕೃಷಿ ಕಾಯಕದ ಬಗ್ಗೆ ರೈತರಿಂದ ಕಲಿಯಬೇಕಿದೆ. ರೈತರು ಸಹ ವಿದ್ಯಾರ್ಥಿಗಳಿಂದ ಬೆಳೆ ಬೆಳೆಯುವ ಕುರಿತು ಮಾಹಿತಿ ಹಂಚಿಕೊಳ್ಳಬೇಕು ಎಂದರು. ಕಾಲೇಜು ತಾಂತ್ರಿಕ ಅಧಿಕಾರಿ ಡಾ. ಸಿ.ನಾರಾಯಣಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ಅಂತಿಮ ವರ್ಷದಲ್ಲಿ ಮೂರು ತಿಂಗಳ ಗ್ರಾಮೀಣ ಅನುಭವ ಇರುತ್ತದೆ. ಗ್ರಾಮೀಣ ಭಾಗದಲ್ಲಿ ರೈತರು ಬೆಳೆಯುವ ಬೆಳೆ, ಅನುಸರಿಸುವ ಪದ್ಧತಿ ಹಾಗೂ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆಯಬೇಕು ಎಂದರು.
ಮುಖಂಡರಾದ ಟಿ.ರಾಜಣ್ಣ, ಎಂ.ಸುರೇಶ್, ಯಶ್, ಮುನೇಗೌಡ, ಗೋಪಾಲಯ್ಯ, ಶಂಕರಪ್ಪ, ಮಧುಸೂದನ್ ಇತರರು ಇದ್ದರು.