ಜಿಲ್ಲೆ

ಮಣಿಪುರ ಮಾದಕ ಜಾಲ ದೇಶಕ್ಕೆ ಅಪಾಯ ತಂದೊಡ್ಡುತ್ತಿದೆ : ಮಣಪುರದ ಪ್ರಾಧ್ಯಾಪಕಿ ಡಾ. ಉರ್ಮಿಕಾ ಮಾಬ್ಬಮ ಕಳವಳ

ಸದೇಶ್ ಕಾರ್ಮಾಡ್

ಮೈಸೂರು: ಮಣಿಪುರದ ಮಾದಕ ಜಾಲ ಕೇವಲ ಮಣಿಪುರಕ್ಕೆ ಮಾತ್ರವಲ್ಲ ದೇಶಕ್ಕೆ ಅಪಾಯ ತಂದೊಡ್ಡುತ್ತಿದೆ ಎಂದು ಮಣಿಪುರದ ಸಂಸ್ಕೃತಿ ವಿದ್ಯಾಲಯದ ಪ್ರಾಧ್ಯಾಪಕಿ ಡಾ. ಉರ್ಮಿಕಾ ಮಾಬ್ಬಮ ಕಳವಳ ವ್ಯಕ್ತಪಡಿಸಿದರು.

ನಮೋ ಬ್ರಿಗೇಡ್ ಲಕ್ಷ್ಮೀಪುರಂನ ಗೋಪಾಲಸ್ವಾಮಿ ಶಿಶು ವಿಹಾರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಉರಿಯುತ್ತಿದೆ ಮಣಿಪುರ, ಏನಿದಕ್ಕೆ ಪರಿಹಾರ’ ಕಾರ್ಯಕ್ರಮದಲ್ಲಿ ಮಾತನಾಡಿ, ಗುಡ್ಡಗಾಡು ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾದಕ ವಸ್ತುಗಳು ಉತ್ಪಾದನೆಯಾಗುತ್ತಿದ್ದು, ಇದಕ್ಕೆ ಮಣಿಪುರದ ಯುವಜನರು ಬಲಿಯಾಗುತ್ತಿದ್ದಾರೆ. ಮಣಿಪುರದಲ್ಲಿ ಬಹುತೇಕ ಜನರು ಮಾದಕ ವ್ಯಸನಿಗಳಾಗುತ್ತಿದ್ದು, ಸ್ಥಳೀಯವಾಗಿ ಮಾದಕ ವಸ್ತುಗಳು ಅಗ್ಗದ ಬೆಲೆಯಲ್ಲಿ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲರು ಮಾದಕ ವಸ್ತುಗಳ ದಾಸರಾಗುತ್ತಿದ್ದಾರೆ. ಮಾದಕ ವಸ್ತುಗಳ ಉತ್ಪಾದನೆ ಹಾಗೂ ಸಾಗಾಟ ತಡೆಯೊಡ್ಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಎನ್‌ಸಿಸಿಯಲ್ಲಿ ಪ್ರಥಮ ರಕ್ಷಾಮಂತ್ರಿ ಪದಕ ವಿಜೇತರಾದ ಮಣಿಪುರದ ಮೇಜರ್ ಮೋತಿಮಾಲ ಗ್ಯಾಂಗೋಮ್ ಮಾತನಾಡಿ, ಮೂರು ತಿಂಗಳಿನಿಂದ ಮಣಿಪುರ ಪರಿಸ್ಥಿತಿ ತುಂಬಾ ಬಿಗಡಾಯಿಸಿದೆ. ಮಣಿಪುರದಲ್ಲಿ ವಾಸ್ತವವಾಗಿ ಏನು ನಡೆಯುತ್ತಿದೆ ಎಂಬ ಸ್ಪಷ್ಟತೆ ದೇಶದ ಇತರೆ ಭಾಗದ ಜನರಿಗೆ ಇಲ್ಲವಾಗಿದೆ. ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಹಾಗೂ ಮಣಿಪುರದ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ನಮಗೆ ನಿಮ್ಮೆಲ್ಲರ ಸಹಕಾರದ ಅವಶ್ಯಕತೆ ಇದೆ ಎಂದು ಹೇಳಿದರು.

ಕಳೆದ ಮೂರು ತಿಂಗಳ ಅವಧಿಯಲ್ಲಿ ಮೈತೈ ಹಾಗೂ ಕುಕಿ ಸಮುದಾಯಗಳ ನಡುವೆ ದೊಡ್ಡ ಜನಾಂಗೀಯ ಸಂಘರ್ಷ ನಡೆದಿದೆ. ನಾನು ಮೈತೈ ಸಮುದಾಯಕ್ಕೆ ಸೇರಿದವಳು. ನಮ್ಮ ಸಮುದಾಯ ಕುಕಿಗಳಷ್ಟು ಶ್ರೀಮಂತರಲ್ಲ, ಅವರ ಬಳಿ ಇರುವಂತೆ ನಮ್ಮಲ್ಲಿ ಸಶ್ತ್ರಾಸ್ತ್ರಗಳು ಇಲ್ಲ. ಕುಕಿ ಸಮುದಾಯ ಗುಡ್ಡಗಾಡು ಪ್ರದೇಶದಲ್ಲಿ ನೆಲೆಸಿದ್ದು, ಗುಡ್ಡಗಾಡು ಪ್ರದೇಶದಲ್ಲಿ ಮಾದಕ ವಸ್ತುಗಳನ್ನು ಬೆಳೆದು ಮಾರಾಟ ಮಾಡಿ ಕೋಟ್ಯಾಂತರ ರೂ. ಸಂಪಾದಿಸುತ್ತಿದ್ದಾರೆ. ಅವರ ಬಳಿ ಹಣ, ಸಶ್ತ್ರಾಸ್ತ್ರ ಸೇರಿದಂತೆ ಎಲ್ಲವೂ ಇದೆ. ಹೀಗಿರುವಾಗ ಅವರು ಮತ್ತೊಂದು ಸಮುದಾಯದ ಮೇಲೆ ದಾಳಿ ನಡೆಸುವುದು, ಹತ್ಯೆ ಮಾಡುವುದು ಅವರಿಗೆ ಅತ್ಯಂತ ಸುಲಭದ ಕೆಲಸವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಈಶಾನ್ಯ ರಾಜ್ಯಗಳನ್ನು ಭಾರತದಿಂದ ದೂರ ಇಡುವ ಪ್ರಯತ್ನ ಬ್ರಿಟೀಷರ ಕಾಲದಿಂದಲೂ ವ್ಯಾಪಕವಾಗಿ ನಡೆದುಕೊಂಡು ಬಂದಿದೆ. ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿ 1900ರಲ್ಲಿ ಹಿಂದುಗಳ ಸಂಖ್ಯೆ ಶೇ.98 ರಷ್ಟು ಇತ್ತು, ಕ್ರೈಸ್ತರ ಸಂಖ್ಯೆ ಶೇ.2 ರಷ್ಟು ಇತ್ತು. 2000ನೇ ಇಸವತಿಯಲ್ಲಿ ಹಿಂದುಗಳ ಸಂಖ್ಯೆ ಶೇ.2ಕ್ಕೆ ಕುಸಿತ ಕಂಡರೆ, ಕ್ರೈಸ್ತರ ಸಂಖ್ಯೆ ಶೇ.98ಕ್ಕೆ ಏರಿಕೆಯಾಯಿತು. ಈಶಾನ್ಯ ರಾಜ್ಯಗಳಲ್ಲಿ ಪ್ರಸ್ತುತ ಮಣಿಪುರದಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಗಳು ಇದ್ದಾರೆ ಎಂದು ಹೇಳಿದರು.

ಮಣಿಪುರ ಗುಡ್ಡಗಾಡು ಹಾಗೂ ಕಣಿವೆಗಳಿಂದ ಕೂಡಿದ ರಾಜ್ಯವಾಗಿದೆ. ಮಣಿಪುರದಲ್ಲಿ ಶೇ.10 ರಷ್ಟು ಕಣಿವೆ ಹಾಗೂ ಉಳಿದ ಭಾಗ ಗುಡ್ಡಗಾಡು ಪ್ರದೇಶವಾಗಿದೆ. ಕಣಿವೆ ಪ್ರದೇಶದಲ್ಲಿ ಹಿಂದುಗಳಾದ ಮೈತೈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಕುಕಿ, ನಾಗಾ ಸೇರಿದಂತೆ 36 ಬುಡಕಟ್ಟು ಜನರು ವಾಸ ಮಾಡುತ್ತಿದ್ದಾರೆ. ಇಲ್ಲಿ ವಿವಿಧ ಜನಾಂಗಗಳ ನಡುವೆ ಜನಾಂಗೀಯ ಘರ್ಷಣೆ ನಡೆಯುತ್ತಿರುವುದು ಹೊಸತೇನು ಅಲ್ಲ. ಆದರೆ, ಮೈತೈ ಹಾಗೂ ಕುಕಿಗಳ ನಡುವೆ ನಡೆದ ಘರ್ಷಣೆಯನ್ನು ಹಿಂದು-ಕ್ರೈಸ್ತರ ನಡುವಿನ ಕಲಹ ಎಂದು ಜಾಗತಿಕವಾಗಿ ಬಿಂಬಿಸುವ ಕಾರ್ಯ ವ್ಯವಸ್ಥಿತವಾಗಿ ನಡೆಯಿತು ಎಂದರು.